ಕೊಡವೂರು ಮಸೀದಿ ಭೂ ಹಸ್ತಾಂತರ, ರದ್ದತಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಪ್ರಮೋದ್ ಮಧ್ವರಾಜ್

ಉಡುಪಿ, ಜೂ.28: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿರುವ ನಗರ ಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ಕಲ್ಮತ್ ಮಸೀದಿಗೆ ಸಂಬಂಧಿಸಿದ ಭೂ ಹಸ್ತಾಂತರ ಮತ್ತು ರದ್ದತಿ ಪ್ರಕ್ರಿಯೆಗಳಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.
ಸರಕಾರಿ ಜಾಗವನ್ನು ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದಾಗ ವಕ್ಫ್ ಬೋರ್ಡ್ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ ವರ್ಗಾಯಿಸಿರುವ ಕುರಿತ ಆಪಾದನೆ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಕಲ್ಮತ್ ಮಸೀದಿಗೆ ಜಾಗದ ಹಸ್ತಾಂತರದ ಪ್ರಕ್ರಿಯೆಗಳು 2018ರಲ್ಲಿ ನಡೆದಿರುವ ಬಗ್ಗೆ ಮಾಹಿತಿಯಿದ್ದು, ಮೇ ತಿಂಗಳಿನಲ್ಲಿ ಚುನಾವಣೆ ನಡೆದು ನಾನು ಸೋತು ಶಾಸಕ ಸ್ಥಾನದ ಅಧಿಕಾರವನ್ನು ಕಳೆದುಕೊಂಡಿದ್ದೆ ಎಂಬುದನ್ನು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿರುವವರು ಮರೆತಿರುವಂತಿದೆ ಎಂದು ಅವರು ಹೇಳಿದ್ದಾರೆ.
2018 ರ ಬಳಿಕದ ಈ ಎಲ್ಲಾ ಸರಕಾರಿ ಪ್ರಕ್ರಿಯೆಗಳು ಸರಕಾರಿ ಇಲಾಖೆಗಳ ಮೂಲಕವೇ ಆಗಿದೆ ಎನ್ನುವುದು ಗಮನಿಸಬೇಕಾಗಿದೆ. ನಾನು ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಯಾವ ಜಾತಿ-ಧರ್ಮದ ರಾಜಕೀಯ ಮಾಡದೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪಾಲಿಸಿದ್ದೇನೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ವೈಯಕ್ತಿಕವಾಗಿ ನಾನು ಯಾವ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಚರ್ಚಿಸಿಲ್ಲ ಮತ್ತು ಯಾವ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







