ಬಾಂಗ್ಲಾದಲ್ಲಿ ಲಾಕ್ಡೌನ್ ಕಠಿಣಗೊಳಿಸಿದ ಬೆನ್ನಲ್ಲೇ ಸಾಮೂಹಿಕ ವಲಸೆಗೆ ಚಾಲನೆ

ಸಾಂದರ್ಭಿಕ ಚಿತ್ರ
ಢಾಕಾ, ಜೂ.28: ಬಾಂಗ್ಲಾದೇಶದಲ್ಲಿ ಕೊರೋನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಕಠಿಣಗೊಳಿಸಿದ ಹಿನ್ನೆಲೆಯಲ್ಲಿ, ಸಾವಿರಾರು ವಲಸೆ ಕಾರ್ಮಿಕರ ಸಾಮೂಹಿಕ ವಲಸೆ ಪ್ರಕ್ರಿಯೆ ರವಿವಾರ ಸಂಜೆಯಿಂದ ಆರಂಭವಾಗಿದೆ ಎಂದು ವರದಿಯಾಗಿದೆ. ಕಠಿಣ ಲಾಕ್ಡೌನ್ ನಿಯಮ ಸೋಮವಾರದಿಂದ ಹಂತ ಹಂತವಾಗಿ ಅನುಷ್ಟಾನಗೊಳ್ಳಲಿದೆ ಎಂದು ಸರಕಾರ ಘೋಷಿಸಿದೆ.
ಎಪ್ರಿಲ್ ಮಧ್ಯಭಾಗದಲ್ಲಿ ಕೊರೋನ ಸೋಂಕು ಪ್ರಕರಣ ಹಾಗೂ ಸೋಂಕಿನಿಂದ ಸಾವಿನ ಪ್ರಕರಣ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮೇ ತಿಂಗಳಿನಲ್ಲಿ ಸೋಂಕು ಕಡಿಮೆಯಾದರೂ ಜೂನ್ ಮಧ್ಯಭಾಗದಿಂದ ಮತ್ತೆ ಏರುಗತಿಯಲ್ಲಿದೆ. ಈ ಕಾರಣದಿಂದ ಸೋಮವಾರದಿಂದ ಲಾಕ್ಡೌನ್ ನಿಯಮ ಬಿಗಿಗೊಳಿಸಲಾಗಿದೆ. ಅಂಗಡಿ, ಮಾರುಕಟ್ಟೆ, ಸಾರಿಗೆ ಮತ್ತು ಕಚೇರಿಗಳನ್ನು ಮುಚ್ಚಲು ಮತ್ತು ಜನರು ಮನೆಯಲ್ಲಿಯೇ ಇರುವಂತೆ ಆದೇಶಿಸಲಾಗಿದೆ.
ಅಗತ್ಯ ಸೇವೆಗಳು ಹಾಗೂ ರಫ್ತು ಮಾಡುವ ಕಾರ್ಖಾನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗೆ ಸರಕಾರ ಬಿಗಿ ಲಾಕ್ಡೌನ್ ಘೋಷಣೆ ಮಾಡುತ್ತಿರುವಂತೆಯೇ ಢಾಕಾದಲ್ಲಿ ವಲಸೆ ಕಾರ್ಮಿಕರ ಸಾಮೂಹಿಕ ಗುಳೆ ಆರಂಭವಾಗಿದೆ. ಬಸ್ಸು ಸಂಚಾರವನ್ನು ಜೂನ್ 22ರಿಂದಲೇ ನಿಷೇಧಿಸಿರುವುದರಿಂದ ರಿಕ್ಷಾಗಳಲ್ಲಿ, ಮೋಟಾರ್ ಬೈಕ್ಗಳಲ್ಲಿ ಹಾಗೂ ಆಂಬ್ಯುಲೆನ್ಸ್ ಬಾಡಿಗೆ ಪಡೆದು.. ಹೀಗೆ ಸಿಕ್ಕ ಸಿಕ್ಕ ವಾಹನದ ಮೂಲಕ ತಮ್ಮ ಗ್ರಾಮದತ್ತ ದೌಡಾಯಿಸಿದ್ದಾರೆ.
ದೋಣಿಗಳ ಮೂಲಕ ಪ್ರಯಾಣಕ್ಕೆ ನಿರ್ಬಂಧ ಇಲ್ಲದಿರುವುದರಿಂದ ಕೆಲವು ದೋಣಿಗಳು 24 ಗಂಟೆಯೂ ಕಾರ್ಯನಿರ್ವಹಿಸಿ, ಒಂದು ಟ್ರಿಪ್ ನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸಿದೆ ಎಂದು ವರದಿಯಾಗಿದೆ. ರವಿವಾರ ಒಂದೇ ದಿನ ಕನಿಷ್ಟ 50,000 ಜನ ದೋಣಿಗಳ ಮೂಲಕ ನದಿ ದಾಟಿ ತಮ್ಮ ಊರಿನತ್ತ ತೆರಳಿದ್ದಾರೆ .
ಶ್ರೀನಗರ ಪಟ್ಟಣದಲ್ಲಿ ರವಿವಾರ ಬೆಳಗ್ಗಿನಿಂದಲೇ ದೋಣಿಗಳ ಮೂಲಕ ಪ್ರಯಾಣಿಸಲು ಜನರ ಮಾರುದ್ದದ ಸರತಿ ಸಾಲು ಇತ್ತು ಎಂದು ಸರಕಾರಿ ಅಧೀನದ ಬಾಂಗ್ಲಾದೇಶ್ ಇನ್ಲ್ಯಾಂಡ್ ವಾಟರ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಶನ್ ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಾಕ್ಡೌನ್ ಸಂದರ್ಭ ಮಾಡಲು ಕೆಲಸ ಇರುವುದಿಲ್ಲ. ಕೆಲಸ ಮಾಡದಿದ್ದರೆ ಮನೆಯ ಬಾಡಿಗೆ ಕೊಡುವುದು ಹೇಗೆ. ಆದ್ದರಿಂದ ಎಲ್ಲವನ್ನೂ ಗಂಟುಮೂಟೆ ಕಟ್ಟಿಕೊಂಡು ಊರಿಗೆ ಹೊರಟಿರುವುದಾಗಿ ಕಾರ್ಮಿಕರು ಪ್ರತಿಕ್ರಿಯಿಸಿದ್ದಾರೆ.