ದೇಶದಲ್ಲಿ ಒಟ್ಟು 40,845 ಬ್ಲ್ಯಾಕ್ ಫಂಗಸ್ ಪ್ರಕರಣಗಳು: ಆರೋಗ್ಯ ಸಚಿವ ಹರ್ಷವರ್ಧನ

ಹೊಸದಿಲ್ಲಿ,ಜೂ.28: ದೇಶದಲ್ಲಿ ಈವರೆಗೆ ಒಟ್ಟು 40,845 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು,ಈ ಪೈಕಿ 31,344 ಪ್ರಕರಣಗಳು ರಿನೊಸೆರ್ಬಿಯಲ್ ಸ್ವರೂಪದ್ದಾಗಿವೆ ಮತ್ತು ಒಟ್ಟು 3,129 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರು ಸೋಮವಾರ ತಿಳಿಸಿದರು.
ಕೋವಿಡ್-19 ಕುರಿತು ಉನ್ನತ ಮಟ್ಟದ ಸಮಿತಿಯ 29ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಅವರು,ಈ ಪೈಕಿ 13,083 ರೋಗಿಗಳು (ಶೇ.32) 18ರಿಂದ 45 ವರ್ಷ ವಯೋಮಾನದವರಾಗಿದ್ದು,17,464 ರೋಗಿಗಳು (ಶೇ.42) 45ರಿಂದ 60 ವರ್ಷದವರು ಮತ್ತು 10,082 ರೋಗಿಗಳು (ಶೇ.24) 60 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತವು ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದ್ದು, ಈವರೆಗೆ ನೀಡಲಾಗಿರುವ ಒಟ್ಟು ಡೋಸ್ ಗಳ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ. ಅಮೆರಿಕವು 2020 ಡಿ. 14ರಿಂದ ಲಸಿಕೆ ನೀಡಿಕೆಯನ್ನು ಆರಂಭಿಸಿದ್ದರೆ ಭಾರತದಲ್ಲಿ 2021,ಜ.1ರಿಂದ ಆರಂಭಗೊಂಡಿತ್ತು. ಸೋಮವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ವಿವಿಧ ವರ್ಗಗಳಡಿ ಒಟ್ಟು 32,36,63,297 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದರು.
ಸೋಮವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಕೇವಲ 46,148 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994ಕ್ಕೆ ಇಳಿದಿದೆ ಎಂದು ಹರ್ಷವರ್ಧನ ತಿಳಿಸಿದರು.





