ಅಂಬಾನಿ ನಿವಾಸಕ್ಕೆ ಬಾಂಬ್ ಬೆದರಿಕೆ: ಎನ್ಕೌಂಟರ್ ತಜ್ಞ ಪ್ರದೀಪ್ ಶರ್ಮಾಗೆ ಜು.12ರವರೆಗೆ ನ್ಯಾಯಾಂಗ ಬಂಧನ

ಫೈಲ್ ಚಿತ್ರ
ಮುಂಬೈ,ಜೂ.28: ಕೈಗಾರಿಕೋದ್ಯಮಿ ಮುಕೇಶ ಅಂಬಾನಿ ಅವರ ನಿವಾಸ ‘ಆ್ಯಂಟಿಲಾ’ಬಳಿ ಸ್ಫೋಟಕಗಳು ತುಂಬಿದ್ದ ವಾಹನ ಪತ್ತೆ ಮತ್ತು ಉದ್ಯಮಿ ಮನ್ಸುಖ್ ಹಿರೇನ್ ಹತ್ಯೆ ಪ್ರಕರಣದಲ್ಲಿ ಮಾಜಿ ‘ಎನ್ಕೌಂಟರ್ ತಜ್ಞ’ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಸೋಮವಾರ ಇಲ್ಲಿಯ ಎನ್ಐಎ ನ್ಯಾಯಾಲಯವು ಜು.12ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಎನ್ಐಎ ಅಧಿಕಾರಿಗಳು ಶರ್ಮಾರನ್ನು ಕಳೆದ ವಾರ ಬಂಧಿಸಿದ್ದರು. ಎನ್ಐಎ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
ಜೂ.11ರಂದು ಮಲಾಡ್ನಲ್ಲಿ ಬಂಧಿಸಲ್ಪಟ್ಟಿದ್ದ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಸಂತೋಷ ಶೆಲಾರ್ ಮತ್ತು ಆನಂದ ಜಾಧವ ಅವರಿಗೂ ಜು.12ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಇದಕ್ಕೂ ಮೊದಲು ಎನ್ಐಎ ಪೊಲೀಸ್ ಅಧಿಕಾರಿಗಳಾದ ಸಚಿನ್ ವಝೆ, ರಿಯಾಝುದ್ದೀನ್ ಖಾಜಿ ಮತ್ತು ಸುನೀಲ್ ಮಾನೆ ಅವರನ್ನು ಬಂಧಿಸಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಶಿಂದೆ ಮತ್ತು ಕ್ರಿಕೆಟ್ ಬುಕ್ಕಿ ನರೇಶ್ ಗೋರ್ ಅವರನ್ನೂ ಎನ್ಐಎ ಬಂಧಿಸಿತ್ತು.







