ಕೇರಳದ ಕಮ್ಯುನಿಸ್ಟ್ ಸರಕಾರ ಕನ್ನಡವನ್ನು ನಿರ್ನಾಮ ಮಾಡುತ್ತಿದೆ: ಸಂಸದ ಪ್ರತಾಪ್ ಸಿಂಹ

ಮೈಸೂರು, ಜೂ.28: ಕಾಸರಗೋಡಿನಲ್ಲಿ ಕನ್ನಡವನ್ನು ನಿರ್ನಾಮ ಮಾಡುವ ಕೆಲಸವನ್ನು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡವನ್ನು ನಿರ್ನಾಮ ಮಾಡುವ ಕೆಲಸವನ್ನು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಮಾಡುತ್ತಿದೆ. ಈ ಸಂಬಂದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇರಳದ ಮುಖ್ಯಮಂತ್ರಿ ಜೊತೆ ಮಾತನಾಡಬೇಕು. ಮಂಜೇಶ್ವರ ವಿಧಾನಸಭೆ ವ್ಯಾಪ್ತಿಯಲ್ಲಿನ ಊರುಗಳ ಕನ್ನಡದ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೇರಳ ಸರ್ಕಾರ ಕಾಸರಗೋಡಿನ ಹಲವು ಊರುಗಳ ಕನ್ನಡದ ಹೆಸರನ್ನು ಬದಲಾಯಿಸಲು ಹೊರಟಿರುವುದನ್ನು ಕನ್ನಡ ಸಂಘಟನೆ ಸೇರಿದಂತೆ ಎಲ್ಲರೂ ವಿರೋಧಿಸಿ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.
ರಾಜ್ಯದ ಹಲವು ನಾಯಕರುಗಳು ಕೇರಳದ ನಾಯಕರೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ. ಕನ್ನಡದ ಮೇಲಿನ ಪ್ರಹಾರ ನಿಲ್ಲಬೇಕು, ಹಾಗಾಗಿ ಎಲ್ಲರೂ ಒಕ್ಕೊರಲಿನಿಂದ ಧ್ವನಿ ಎತ್ತಬೇಕು. ಆದರೆ ಇದುವರೆಗೂ ಯಾವುದೇ ಹೋರಾಟಗಾರರು, ಸಾಹಿತಿಗಳು ರಾಜಕಾರಣಿಗಳು ಧ್ವನಿ ಎತ್ತದಿರುವುದು ಬೇಸರ ತರಿಸಿದೆ ಎಂದು ಹೇಳಿದರು.
ಲಸಿಕೆ ಅಭಿಯಾನವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಈ ಹಿಂದೆ ಉಪ್ಪು, ಸಕ್ಕರೆ, ಅಕ್ಕಿ, ಬೇಳೆ ಕೊಡುವಾಗ ಆ ಪೊಟ್ಟಣಗಳ ಮೇಲೆ ಸಿದ್ದರಾಮಯ್ಯ ಅವರ ಫೋಟೋ ಹಾಕಿಸಿಕೊಂಡಿರಲಿಲ್ಲವೆ. ಆಯಾ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಂಬಂಧ ಪಟ್ಟ ಸಚಿವರ ಫೋಟೋ ಹಾಕಿಸಿಕೊಳ್ಳುವುದು ಸಹಜ. ಹಾಗಾಗಿ ಲಸಿಕೆ ಅಭಿಯಾನ ರಾಷ್ಟ್ರವ್ಯಾಪ್ತಿ ನಡೆಯುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿಸಿಕೊಳ್ಳಲಾಗಿದೆ. ಆದರೆ ಪಕ್ಷದ ಚಿಹ್ನೆ, ಧ್ವಜ ಅಥವಾ ಸರ್ಕಾರದ ವ್ಯವಸ್ಥೆಯೊಳಗೆ ಇಲ್ಲದ ವ್ಯಕ್ತಿಯ ಫೋಟೊ ಹಾಕುವುದು ತಪ್ಪು ಎಂದು ಹೇಳಿದರು.
ಮೈಸೂರು-ಕೊಡಗು ಸಂಸದನಾಗಿ ಎರಡು ಬಾರಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ಸ್ಥಾನ ಬೇರೊಂದಿಲ್ಲ. ಸಚಿವ ಸ್ಥಾನವೇ ಎಲ್ಲವೂ ಅಲ್ಲ. ಹಾಗಾಗಿ ಸಂಸದನಾಗಿ ಉತ್ತಮ ಕೆಲಸ ಮಾಡುತ್ತೇನೆ. ಸಂಸದ, ಶಾಸಕರಾದ ಮೇಲೆ ಮಂತ್ರಿಯಾಗಬೇಕೆಂಬ ಆಸೆ ಬರುತ್ತದೆ. ನಂತರ ಮುಖ್ಯಮಂತ್ರಿಯಾಗಬೇಕು ಎನಿಸುತ್ತದೆ. ಅದಕ್ಕಿಂತ ಮುಖ್ಯವಾಗಿ ನಮಗೆ ಯಾವ ಸ್ಥಾನ ಸಿಕ್ಕಿದೆಯೊ ಆ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಎಂದು ಹೇಳಿದರು.







