ಚಿಕಾಗೊ: ಎರಡು ಗುಂಡಿನ ದಾಳಿ ಪ್ರಕರಣ; ಓರ್ವ ಮಹಿಳೆ ಸಾವು, 13 ಮಂದಿಗೆ ಗಾಯ

ಚಿಕಾಗೊ, ಜೂ. 28: ಚಿಕಾಗೊದಲ್ಲಿ ರವಿವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಗುಂಡು ಹಾರಾಟ ಪ್ರಕರಣಗಳಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌತ್ ಶೋರ್ ಪ್ರದೇಶದಲ್ಲಿ ಸುಮಾರು ರಾತ್ರಿ 9 ಗಂಟೆಗೆ ಎಸ್ಯುವಿ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆರು ಬಾರಿ ಗುಂಡಿನ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಅಲ್ಲಿ ಮೃತಪಟ್ಟಿದ್ದಾರೆ. ಇತರ ನಾಲ್ವರು ವ್ಯಕ್ತಿಗಳು ಹಾಗೂ 15 ವರ್ಷದ ಬಾಲಕನನ್ನು ಕೂಡ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ಎರಡು ಗಂಟೆಗಳ ಬಳಿಕ ಮಾರ್ಕ್ವೆಟ್ಟೆ ಪಾರ್ಕ್ ಪ್ರದೇಶದಲ್ಲಿ ಇನ್ನೊಂದು ಗುಂಡಿನ ದಾಳಿ ಪ್ರಕರಣದಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ಇದೇ ಸಂದರ್ಭ ನಡೆದ ವಾಹನ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಚಿಕಾಗೊದ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ದಾಳಿಗೂ ವಾಹನಗಳ ಅಪಘಾತಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಇದುವರೆಗೆ ತಿಳಿದು ಬಂದಿಲ್ಲ. ಈ ಅಪಘಾತವೇ ಗುಂಡಿನ ದಾಳಿಗೆ ಕಾರಣವೇ ಎಂಬ ಬಗ್ಗೆ ಕೂಡ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಘಟನೆಗೆ ಸಂಬಂಧಿಸಿ ಇದುವರೆಗೆ ಯಾರೊಬ್ಬ ಶಂಕಿತರನ್ನು ಕೂಡ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.





