ಉಡುಪಿ ಜಿಲ್ಲೆಯ 6,000 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ವಿತರಣೆ

ಉಡುಪಿ, ಜೂ.28: ಉಡುಪಿ ಜಿಲ್ಲೆಯ ಸರಕಾರಿ, ಖಾಸಗಿ ಅನುದಾನಿತ/ಅನುದಾನ ರಹಿತ ಹಾಗೂ ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜುಗಳ 18ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲೆಯಾದ್ಯಂತ ಇಂದು ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಲಸಿಕಾ ಅಭಿಯಾನಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು. ಜಿಲ್ಲೆಯ 15 ಕಾಲೇಜುಗಳಲ್ಲಿ ನಡೆದ ಶಿಬಿರದಲ್ಲಿ ಸುಮಾರು 6,000 ಮಂದಿ ವಿದ್ಯಾರ್ಥಿಗಳು ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡರು.
ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ನಡೆದ ಅಭಿಯಾನದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳು ಕೂಡ ಆಗಮಿಸಿ ದರಿಂದ ಕೆಲಕಾಲ ಗೊಂದಲಗಳು ನಿರ್ಮಾಣಗೊಂಡವು. ಹೊರ ಜಿಲ್ಲೆಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿ ಗಳು ಲಸಿಕೆಗಾಗಿ ಕಾಲೇಜುಗಳಿಗೆ ಆಗಮಿಸುತ್ತಿರುವುದು ಎಲ್ಲ ಕಡೆಗಳಲ್ಲಿ ಕಂಡು ಬಂತು. ಇವರಿಗೆ ಆಯಾ ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.







