ಪರಿಶೀಲನೆಗೆ ಬಂದ ಸಚಿವ ಅಂಗಾರ, ಶಾಸಕ ಉಮಾನಾಥ ಕೋಟ್ಯಾನ್‌ಗೆ ಗ್ರಾಮಸ್ಥರಿಂದ ಘೇರಾವ್
ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆ ಸ್ಥಾಪನೆ?

ಮೂಡುಬಿದಿರೆ, ಜೂ.28: ಕಲ್ಲಮುಂಡ್ಕೂರು ಗ್ರಾಪಂ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಕೊಳತ್ತಾರು ಪದವು ಸರಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರಕಾರದ ಬೃಹತ್ ಸೀಫುಡ್ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ಆಗಮಿಸಿದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಹಾಗೂ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಸ್ಥಳೀಯರು ಘೇರಾವ್ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ಈ ಕೈಗಾರಿಕೆ ಸ್ಥಾಪನೆಯ ಸಾಧಕ ಬಾಧಕಗಳ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡದೆ, ನಮ್ಮ ಅಭಿಪ್ರಾಯವನ್ನು ಪಡೆಯದೆ, ಸ್ಥಳ ಪರಿಶಿಲನೆಗೆ ಹೇಗೆ ಬಂದಿದ್ದೀರಿ ಎಂದು ಸ್ಥಳೀಯರು ಸಚಿವ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಉಮಾನಾಥ ಕೋಟ್ಯಾನ್, ಇದು ರಾಜ್ಯ ಸರಕಾರದ ಬೃಹತ್ ಕೈಗಾರಿಕೆಯಾಗಿದ್ದು, ಇದನ್ನು ತನ್ನ ಕ್ಷೇತ್ರದಲ್ಲಿ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ಇದು ಸುಮಾರು 50 ಎಕರೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಖಾಸಗಿ ಜಾಗ ಅತಿಕ್ರಮಣವಾಗುವುದಿಲ್ಲ ಹಾಗೂ ಸ್ಥಳೀಯರಿಗೆ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕೂಡ ಲಭಿಸಲಿದೆ ಎಂದು ಸಮಜಾಯಿಷಿ ನೀಡಿದರು.
ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು, ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದಾಗ ಶಾಸಕರು ನಿರಾಕರಿಸಿದರು. ಯೋಜನೆಯ ಬಗ್ಗೆ ತಮಗೆ ಲಿಖಿತ ಮಾಹಿತಿ ನೀಡುವಂತೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಿ ಬಳಿಕ ಶಾಸಕರು ಮತ್ತು ಸಚಿವರು ಅಲ್ಲಿಂದ ತೆರಳಿದರು.
ಕೊಳತ್ತಾರು ಪದವು ಪರಿಸರದ ಸುಮಾರು 250ಕ್ಕೂ ಮಿಕ್ಕಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಹಿಂದೆ ಇದೇ ಪ್ರದೇಶದಲ್ಲಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಮತ್ತು ಬಾಕ್ಸೈಟ್ ಗಣಿಗಾರಿಕೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಸ್ಥಳೀಯರು ಈ ಸಂದರ್ಭದಲ್ಲೂ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಎರಡೂ ಯೋಜನೆಗಳು ಸ್ಥಗಿತಗೊಂಡಿದ್ದವು.
.jpg)







