ಪ್ರತಿ ಸವಾಲಿಗೂ ತಕ್ಕ ಉತ್ತರ ನೀಡುವ ಸಾಮರ್ಥ್ಯ ಭಾರತೀಯ ಸಶಸ್ತ್ರ ಪಡೆಗಳಿಗಿದೆ: ರಾಜನಾಥ್ ಸಿಂಗ್

ಹೊಸದಿಲ್ಲಿ,ಜೂ.28: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ‘ಗಲ್ವಾನ್ ಹುತಾತ್ಮ ’ರ ತ್ಯಾಗವನ್ನು ಭಾರತವೆಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತನ್ನ ಲಡಾಖ್ ಭೇಟಿಯ ಎರಡನೇ ದಿನವಾದ ಸೋಮವಾರ ಹೇಳಿದರು.
ಪ್ರತಿ ಸವಾಲಿಗೂ ತಕ್ಕ ಉತ್ತರ ನೀಡುವ ಸಾಮರ್ಥ್ಯ ಭಾರತೀಯ ಸಶಸ್ತ್ರ ಪಡೆಗಳಿಗಿದೆ ಎಂದು ಒತ್ತಿ ಹೇಳುವ ಮೂಲಕ ಅವರು ಚೀನಾಕ್ಕೆ ಸ್ಪಷ್ಟ ಸಂದೇಶವೊಂದನ್ನೂ ರವಾನಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿಂಗ್,ನೆರೆಯ ದೇಶಗಳೊಂದಿಗೆ ಮಾತುಕತೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು. ಆದರೆ ಯಾರಾದರೂ ತನಗೆ ಬೆದರಿಕೆಯೊಡ್ಡಲು ಯತ್ನಿಸಿದರೆ ಅದನ್ನು ಭಾರತವು ಸಹಿಸುವುದಿಲ್ಲ ಎಂದರು. ಗಡಿ ರಸ್ತೆಗಳ ಸಂಸ್ಥೆಯು ಲಡಾಖ್ ನಲ್ಲಿ ಪೂರ್ಣಗೊಳಿಸಿರುವ 63 ಮೂಲಸೌಕರ್ಯ ಯೋಜನೆಗಳನ್ನೂ ಸಚಿವರು ಉದ್ಘಾಟಿಸಿದರು.
ಕಳೆದ ವರ್ಷದ ಜೂ.15ರಂದು ದಶಕಗಳಲ್ಲಿಯೇ ಉಭಯ ದೇಶಗಳ ನಡುವಿನ ಅತ್ಯಂತ ಗಂಭೀರ ಸಂಘರ್ಷ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿತ್ತು. ಚೀನಿ ಸೈನಿಕರೊಂದಿಗಿನ ಘರ್ಷಣೆಗಳಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆ ಭಾರೀ ಪ್ರಮಾಣದಲ್ಲಿ ಸಾವುನೋವು ಸಂಭವಿಸಿದೆ ಎನ್ನಲಾಗಿದ್ದರೂ,ಫೆಬ್ರವರಿಯಲ್ಲಿ ಅದು ಭಾರತದ ಸೇನೆಯೊಂದಿಗಿನ ಘರ್ಷಣೆಗಳಲ್ಲಿ ತನ್ನ ಐವರು ಸೇನಾಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿತ್ತು.





