ತಪ್ಪು ಕೀ ಉತ್ತರವೇ ಸರಿಯೆಂದು ಹೇಳುತ್ತಿರುವ ಕೆಪಿಎಸ್‍ಸಿ: ಕೆಎಟಿ ಮೊರೆ ಹೋದ ಅಭ್ಯರ್ಥಿಗಳು
ಬೆಂಗಳೂರು, ಜೂ.28: ಪ್ರಥಮ ದರ್ಜೆ ಸಹಾಯಕ(ಎಫ್‍ಡಿಎ) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ತಪ್ಪು ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಕೆಪಿಎಸ್‍ಸಿ ಅಭ್ಯರ್ಥಿಗಳ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ಉದ್ಯೋಗಾಕಾಂಕ್ಷಿಗಳು, ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ.
ಕೆಪಿಎಸ್‍ಸಿಯು ರಾಜ್ಯಾದ್ಯಂತ ಖಾಲಿಯಿರುವ 1,107 ಹುದ್ದೆಗಳಿಗೆ ಫೆ.28ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಅದರಂತೆ ಮಾ.3ರಂದು ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶವನ್ನು ನೀಡಿತ್ತು.
ಅದರಂತೆ ಕೀ ಉತ್ತರಗಳಲ್ಲಿ ಹಲವಾರು ತಪ್ಪುಗಳಿರುವ ಕುರಿತು ಅಭ್ಯರ್ಥಿಗಳು ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಗಳನ್ನು ಪರಿಶೀಲಿಸಿ ಎ.8ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ. ಆದರೆ, ಪರಿಷ್ಕೃತ ಉತ್ತರಗಳಲ್ಲಿಯೂ ತಪ್ಪುಗಳಿರುವುದು ಕಂಡುಬಂದಿರುವುದು ಉದ್ಯೋಗಾಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದೊಂದು ಅಂಕವೂ ಅಮೂಲ್ಯವಾಗಿದ್ದು, ಪ್ರಶ್ನೆಗಳಿಗೆ ತಪ್ಪು ಉತ್ತರಗಳನ್ನು ಆಯೋಗ ನೀಡಿದೆ. ಹಿಂದೆ ಆಯೋಗದಿಂದ ನಡೆಸಿದ ಪರೀಕ್ಷೆಗಳಲ್ಲಿ ಸರಿ ಉತ್ತರಗಳನ್ನು ಈ ಬಾರಿ ಅವರೇ ತಪ್ಪು ಉತ್ತರ ಎಂದು ನೀಡಿದ್ದು, ಒಂದು ಪರೀಕ್ಷೆಗೂ ಇನ್ನೊಂದು ಪರೀಕ್ಷೆಗೂ ಉತ್ತರಗಳು ಬದಲಾಗಲು ಹೇಗೆ ಸಾಧ್ಯವಾಗುತ್ತದೆ ಎಂಬುದು ಆಕಾಂಕ್ಷಿಗಳ ಪ್ರಶ್ನೆಯಾಗಿದೆ.







