ಸುಳ್ಯದ ಕೊಡಿಯಾಲಬೈಲ್ ರುದ್ರ ಭೂಮಿಯಲ್ಲಿ ಶವ ಸಂಸ್ಕಾರದ ದುರ್ನಾತ; ಸ್ಥಳೀಯರಿಂದ ಪ್ರತಿಭಟನೆ

ಸುಳ್ಯ: ಸುಳ್ಯದ ಕೊಡಿಯಾಲಬೈಲ್ ರುದ್ರಭೂಮಿಯಲ್ಲಿ ಈಗ ನಿರಂತರ ಶವ ಸಂಸ್ಕಾರ ನಡೆಯುತ್ತಿರುವುದರಿಂದ ಸಮೀಪದ ಮನೆಗಳಿಗೆ ವಾಸನೆ ಬರುತ್ತಿದೆ. ಊಟ ಮಾಡಲೂ ಕಷ್ಟ ವಾಗುತ್ತಿದೆ ಎಂದು ಸ್ಮಶಾನ ಪರಿಸರ ನಿವಾಸಿಗಳು ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ಕೊಡಿಯಾಲಬೈಲ್ ರುದ್ರ ಭೂಮಿಗೆ ಭಾನುವಾರ ಸುಳ್ಯದ ಬೆಟ್ಟಂಪಾಡಿಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತಂದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಸ್ಥಳೀಯರಾದ ರಾಜು, ಗಣೇಶ, ಲಕ್ಷ್ಮಿ, ನಾಗರಾಜು, ಜಗದೀಶ, ದೇಸುಲು ಮೊದಲಾದವರು "ಇಲ್ಲಿ ನಮ್ಮ ಗ್ರಾಮದಲ್ಲದ ಹಲವಾರು ಶವಗಳನ್ನು ಇಲ್ಲಿ ತಂದು ಸುಡುತ್ತಾರೆ. ದಿನಕ್ಕೆ 2,3 ಶವಗಳು ಬರುತ್ತದೆ. ಇಲ್ಲಿ ವಿಪರೀತ ಹೊಗೆಯಿಂದ ಹಾಗೂ ದುರ್ನಾತದಿಂದ ನಮಗೆ ಮನೆಯಲ್ಲಿ ಕುಳಿತು ಊಟ ಮಾಡಲೂ ಕಷ್ಟವಾಗುತ್ತಿದೆ. ಆದ್ದರಿಂದ ಗ್ರಾಮದವರನ್ನು ಹೊರತು ಪಡಿಸಿ ಹೊರಗಿನವರ ಶವ ಸುಡಬಾರದು ಎಂದರು.
ಪ್ರತಿಭಟನೆಯ ವಿಷಯ ತಿಳಿದ ಪೊಲೀಸರು ಬಂದು ಸೇರಿದ ಜನರನ್ನು ಕಳುಹಿಸಿದರಲ್ಲದೆ, "ವಾಸನೆ ಬಾರದಂತೆ ಶವ ಸಂಸ್ಕಾರ ನಡೆಸಲು, ಸ್ಮಶಾನದಲ್ಲಿ ಶವ ದಹನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವವರಿಗೆ ಹೇಳಿದ್ದಾರೆಂದು ತಿಳಿದು ಬಂದಿದೆ.
"ಅಲ್ಲಿ ಸಮರ್ಪಕವಾಗಿ ಅಂತ್ಯಸಂಸ್ಕಾರ ನಡೆಯುತ್ತಿದೆ. ವಾಸನೆ ಬರುತ್ತಿಲ್ಲ. ಇದನ್ನು ನಾವು ಪಂಚಾಯಿತಿ ಅನುದಾನ ಮತ್ತು ಸಂಘ ಸಂಸ್ಥೆಗಳವರ ದೇಣಿಗೆಯಿಂದ ನಿರ್ಮಿಸಿವೆ. ಸಾರ್ವಜನಿಕ ಸ್ಮಶಾನವಾಗಿರುವುದರಿಂದ ಹಾಗೂ ಇಲ್ಲಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಇರುವುದರಿಂದ ಮೃತದೇಹಗಳನ್ನು ಸಂಸ್ಕಾರಕ್ಕೆ ಇಲ್ಲಿಗೆ ತಂದರೆ ಬೇಡವೆಂದು ಹೇಳಲಾಗುವುದಿಲ್ಲ. ಆದರೂ ಸ್ಥಳೀಯರ ಭಾವನೆಯನ್ನು ಅರ್ಥ ಮಾಡಿಕೊಂಡು ಅವರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಸ್ಮಶಾನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಾಗೂ ಅದರ ಸ್ಥಾಪಕರಾದ ಗ್ರಾ.ಪಂ. ಸದಸ್ಯ ಹರೀಶ್ ಉಬರಡ್ಕ ಹೇಳಿದರು.







