ಕಾರ್ಕಳ : ವಾತ್ಸಲ್ಯ ಆರೋಗ್ಯ ಶಿಬಿರಕ್ಕೆ ಗೃಹಮಂತ್ರಿಯಿಂದ ಚಾಲನೆ

ಕಾರ್ಕಳ: ರಾಜಕಾರಣಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರೆ, ಮುತ್ಸದ್ಧಿಯೊಬ್ಬನು ಮುಂದಿನ ಜನಾಂಗವನ್ನು ದೃಷ್ಟಿಯಲ್ಲಿರಿಸಿ ಕೆಲಸ ಮಾಡುತ್ತಾನೆ. ಆ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಭವಿಷ್ಯದ ದೃಷ್ಟಿಯಲ್ಲಿ ವಿವಿಧ ಫಲಪ್ರದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅವರು ಪೆರ್ವಾಜೆ ಸುಂದರ ಪುರಾಣಿಕ ಶಾಲೆಯಲ್ಲಿ ಕೊರೊನ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಕಾರ್ಕಳ ಕ್ಷೇತ್ರದಾದ್ಯಂತ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ "ವಾತ್ಸಲ್ಯ" ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡರು.
ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ನಡುವೆ ಅಂತಃಕರಣ ಮೆರೆಯಬೇಕಾಗಿದೆ. ಈ ಮೂರು ಹೈವೇಗಳಿದ್ದಂತೆ. ಈ ಹೈವೇಗಳಿಗೆ ಅಂತಃಕರಣ ಎಂಬ ಸ್ಪೀಡ್ ಬ್ರೇಕರ್ ಅವಶ್ಯಕತೆಯಿದೆ. ಸಮಾಜಕ್ಕೆ ಮಾನವ ಕೊಟ್ಟಾಗ ಸಮಾಜ ಶ್ರೀಮಂತವಾಗುತ್ತದೆ ಹೊರತು, ಒಳಗಿಂದೊಳಗೆ ಬರುವ ಗುಣಗಳಾಗಿದ್ದು, ಅದನ್ನು ಇಲ್ಲಿನ ಶಾಸಕರು ತೋರ್ಪಡಿಸಿದ್ದಾರೆ ಎಂದು ಪ್ರಶಂಸಿದರು.
ಕೊರೊನ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ಕಳೆದ 5 ತಿಂಗಳಲ್ಲಿ 24 ಸಾವಿರ ಆಕ್ಸಿಜನ್ ಬೆಡ್ ನಿರ್ಮಾಣ, 5 ಸಾವಿರಕ್ಕಿಂತ ಹೆಚ್ಚು ಐಸಿಯು ಬೆಡ್ ನಿರ್ಮಾಣ, 2 ಸಾವಿರಕ್ಕಿಂತ ಹೆಚ್ಚು ವೆಂಟಿಲೇಟರ್ ಜೋಡಣೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನಿಂದ ಕೊರೊನ ತಡೆಗಟ್ಟುವಲ್ಲಿ 24/7 ಮಾದರಿಯಲ್ಲಿ ಕಾರ್ಯನಿರ್ವಹಿಸಿದ್ದೇವೆ. 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಯೋಜನೆ ಹಾಕಿಕೊಂಡಿದ್ದು, ಆಗಸ್ಟ್ 15ರೊಳಗೆ ಉಡುಪಿ ಜಿಲ್ಲೆಯಲ್ಲಿ 2.40 ಲಕ್ಷ ಮಕ್ಕಳಿಗೆ ಉಚಿತ ತಪಾಸಣೆ ನಡೆಸಲಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ ನೆರವಾಗುವಂತೆ ಆಯುಷ್ಮಾನ್ ಕಾರ್ಡು ಉಪಯೋಗಿಸುವಲ್ಲಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದೇವೆ. ಸರಕಾರಿ ಆಸ್ಪತ್ರೆಯ ಜೊತೆ ಖಾಸಗಿ ಆಸ್ಪತ್ರೆಯಲ್ಲೂ ನೆರವಾಗುವ ರೀತಿ ಆಯುಷ್ಮಾನ್ ಕಾರ್ಡು ಜೋಡಣೆ ಮಾಡಲಿದ್ದೇವೆ ಎಂದರು.
ಸರಕಾರದ ಮುಖ್ಯ ಸಚೇತಕ, ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ವಾತ್ಸಲ್ಯ ಎಂಬ ಹೆಸರಿನಡಿ ಆರೋಗ್ಯ ತಪಾಸಣೆಯನ್ನು ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಒಟ್ಟು 230 ಅಂಗನವಾಡಿ ಹಾಗೂ 220 ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸೇರಿಸಿಕೊಂಡು ಈ ಶಿಬಿರ ಏರ್ಪಾಡಿಸಲಿದ್ದೇವೆ. ಪ್ರತೀ ದಿನ 10 ಕಡೆಗಳಲ್ಲಿ ಶಿಬಿರ ಆಯೋಜನೆಗೊಳ್ಳಲಿದ್ದು, ಮುಂದಿನ ಜುಲೈ ಮತ್ತು ಆಗಸ್ಟ್ ಎರಡು ತಿಂಗಳಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮಕ್ಕಳ ಪೌಷ್ಟಿಕತೆ ಮತ್ತು ಹ್ಯುಮಿನಿಟಿ ಪವರ್ ಹೆಚ್ಚಿಸುವ ಔಷಧಿಯನ್ನು ಉಚಿತವಾಗಿ ನೀಡಲಿದ್ದು, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೂ ನೆರವಾಗುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಜತೆಗೆ ಅಗತ್ಯಯಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಯುಷ್ಮಾನ್ ಯೋಜನೆಯ ಲಾಭ ಪಡೆದುಕೊಳ್ಳುವಲ್ಲಿ ಸರಕಾರದ ಮೂಲಕ ಸಹಕರಿಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ನಕ್ಸಲ್ ನಿಗ್ರಹದಳದ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಸಹಾಯಕ ಕಮಿಷನರ್ ರಾಜು, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುಮಿತ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಫೊಟೋಕ್ಯಾಪ್ಶನ್-ರಾಜ್ಯ ಸಚಿವ ಬಸವರಾಜ ಬೊಮ್ಮಾಯಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ವಾತ್ಸಲ್ಯ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿದರು.







