ಯೂರೊ 2020: ವಿಶ್ವ ಚಾಂಪಿಯನ್ ಫ್ರಾನ್ಸ್ಗೆ ಆಘಾತ

Photo credit: twitter@EURO2020
ಬ್ಯುಚರೆಸ್ಟ್, ಜೂ.29: ವಿಶ್ವ ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್ ತಂಡವನ್ನು 5-4 ಪೆನಾಲ್ಟಿಗಳಿಂದ ಸೋಲಿಸಿದ ಸ್ವಿಟ್ಝರ್ಲ್ಯಾಂಡ್ ತಂಡ ಯೂರೋ-2020 ಟೂರ್ನಿಯ ಎಂಟರ ಘಟ್ಟಕ್ಕೆ ಮುನ್ನಡೆದಿದೆ.
ಸೋಮವಾರ ಬ್ಯುಚರೆಸ್ಟ್ನಲ್ಲಿ ಪಡೆದ ರೋಮಾಂಚಕಾರಿ ಪಂದ್ಯದಲ್ಲಿ ಕೈಲಿಯನ್ ಬಾಪ್ಪೆ ನಿರ್ಣಾಯಕ ಸ್ಪಾಟ್ ಕಿಕ್ನಲ್ಲಿ ಗೋಲು ಗಳಿಸಲು ವಿಫಲರಾಗುವ ಮೂಲಕ ವಿಶ್ವಚಾಂಪಿಯನ್ನರು ಟೂರ್ನಿಯಿಂದ ಹೊರ ನಡೆದರು. ಇದಕ್ಕೂ ಮುನ್ನ ನಿಗದಿತ ಸಮಯದಲ್ಲಿ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿತ್ತು.
90ನೇ ನಿಮಿಷದಲ್ಲಿ ಸ್ವಿಟ್ಝರ್ಲ್ಯಾಂಡ್ ನ ಮಾರಿಯೊ ಗವ್ರನೊವಿಕ್ ಹೊಡೆದ ಗೋಲಿನಿಂದಾಗಿ ಸಮಬಲ ಸಾಧಿಸಲು ಸಾಧ್ಯವಾಗಿತ್ತು. ಕ್ವಾರ್ಟರ್ ಫೈನಲ್ನಲ್ಲಿ ಸ್ವಿಟ್ಝರ್ಲ್ಯಾಂಡ್ ಸ್ಪೇನ್ ಜತೆ ಹೋರಾಡಲಿದೆ.
ವ್ಲಾದಿಮಿರ್ ಪೆಟ್ಕೊವಿಕ್ ನೇತೃತ್ವದ ಸ್ವಿಟ್ಝರ್ಲ್ಯಾಂಡ್ ತಂಡಕ್ಕೆ ಹ್ಯಾರಿಸ್ ಸೆಫೆರೊವಿಕ್ 15ನೇ ನಿಮಿಷದಲ್ಲೇ ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಅವಧಿಯ ಆರಂಭದಲ್ಲಿ ರಿಕಾರ್ಡೊ ರೋಡ್ರಿಗಸ್ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆಯುವ ಮೂಲಕ ಹ್ಯುಗೊ ಲಾರಿಸ್ ಗಮನ ಸೆಳೆದರು. ಈ ಹಂತದಲ್ಲಿ ಐದೂವರೆ ವರ್ಷಗಳ ಬಳಿಕ ಫ್ರಾನ್ಸ್ ತಂಡ ಸೇರಿಕೊಂಡಿದ್ದ ಕರೀಂ ಬೆಂಝಿಮಾ ಎರಡು ಗೋಲುಗಳನ್ನು ಹೊಡೆಯುವ ಮೂಲಕ 2016ರ ಯೂರೊ ಫೈನಲಿಸ್ಟ್ಗಳನ್ನು ಮತ್ತೆ ಹಳಿಗೆ ತಂದರು. ಪಾಲ್ ಪೊಗ್ಬಾ ಮತ್ತೊಂದು ಗೋಲು ಗಳಿಸುವ ಮೂಲಕ ಫ್ರಾನ್ಸ್ ಮುನ್ನಡೆಯನ್ನು 3-1ಕ್ಕೇರಿಸಿದರು.
ಆದರೆ ಸೆಫೆರೊವಿಕ್ ಎರಡನೇ ಗೋಲು ಗಳಿಸಿದ ಬೆನ್ನಲ್ಲೇ ಮಾರಿಯೊ ಗವ್ರನೊವಿಕ್ ಅಂತಿಮ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸುವ ಮೂಲಕ ಹೆಚ್ಚುವರಿ ಅವಧಿಗೆ ಪಂದ್ಯ ವಿಸ್ತರಿಸಲ್ಪಟ್ಟಿತು.
ಸ್ವಿಟ್ಝರ್ಲ್ಯಾಂಡ್ ತನ್ನ ಐದು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡರೆ, ಫ್ರಾನ್ಸ್ನ ಬಾಪ್ಪೆ ಹೊಡೆದ ಕಿಕ್ ಅನ್ನು ಸೊಮೆರ್ ಬಲಕ್ಕೆ ಹಾರಿ ಅದ್ಭುತವಾಗಿ ಹಿಡಿಯುವ ಮೂಲಕ ಚಾಂಪಿಯನ್ನರಿಗೆ ನಿರ್ಗಮನ ಬಾಗಿಲು ತೆರೆದರು. ಹೀಗೆ 83 ವರ್ಷಗಳಲ್ಲೇ ಮೊದಲ ಬಾರಿಗೆ ಸ್ವಿಟ್ಝರ್ಲ್ಯಾಂಡ್ ತಂಡ ಪ್ರಮುಖ ಟೂರ್ನಿಯ ನಾಕೌಟ್ನಲ್ಲಿ ಗೆಲುವು ಸಾಧಿಸಿತು.