ಬಸ್ಸಿನಲ್ಲಿ 50ರಷ್ಟು ಮಹಿಳೆಯರ ಸಾಗಾಟ ಯತ್ನ ಆರೋಪ: ಲಾಕ್ಡೌನ್ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲು

ಮಂಗಳೂರು, ಜೂ. 29: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ಎಂಬಲ್ಲಿ ರವಿವಾರ ರಾತ್ರಿ ಆಸ್ಪತ್ರೆಯೊಂದರ ಬಸ್ಸಿನಲ್ಲಿ ಸ್ಥಳೀಯ ಸುಮಾರು 50ರಷ್ಟು ಮಹಿಳೆಯರನ್ನು ಸಾಗಿಸಲೆತ್ನಿಸಿದ ಆರೋಪಕ್ಕೆ ಸಂಬಂಧಿಸಿ ಸ್ಥಳೀಯರು ನೀಡಿದ ದೂರಿನ ಮೇರೆಗೆ ಲಾಕ್ಡೌನ್ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದೆ.
ಮುಲ್ಕಿಯ ಲಿಂಗಪ್ಪಯ್ಯ ಕಾಡು ಎಂಬಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿದ ಬಸ್ಸಿನಲ್ಲಿ ರಾತ್ರಿ 8:15ರ ಸುಮಾರಿಗೆ ಯಾವುದೇ ಸುರಕ್ಷಿತ ಅಂತರವಿಲ್ಲದೆ ಮಹಿಳೆಯರನ್ನು ಹತ್ತಿಸಿಕೊಂಡು ಸಂಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ತಡೆದು ದೂರು ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.
ಸ್ಥಳೀಯ ಮಹಿಳೆಯರನ್ನು ರಾತ್ರಿ ಹೊತ್ತು ಬಸ್ಸಿನಲ್ಲಿ ಯಾವುದೇ ಸುರಕ್ಷಿತ ಅಂತರವಿಲ್ಲದೆ ಸಾಗಿಸುತ್ತಿದ್ದನ್ನು ಗಮನಿಸಿದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ವಿಚಾರಿಸಿದ್ದು, ಆಸ್ಪತ್ರೆಯ ಮ್ಯಾನೇಜರ್ ಸೂಚನೆಯ ಮೇರೆಗೆ ಲಸಿಕೆಗಾಗಿ ಅವರನ್ನು ಕರೆದೊಯ್ಯುತ್ತಿರುವುದಾಗಿ ಬಸ್ಸಿನ ಚಾಲಕ ತಿಳಿಸಿದ್ದಾನೆ. ಆದರೆ ರಾತ್ರಿ ಹೊತ್ತು ಲಸಿಕೆ ನೀಡಲಾಗುತ್ತದೆಯೇ ಎಂದು ಸ್ಥಳೀಯರು ಪ್ರಶ್ನಿಸಿದಾಗ, ಬೆಳಗ್ಗೆ ನೀಡುತ್ತಾರೆ ಎಂದು ಆತ ಹೇಳಿದ್ದು, ಲಸಿಕೆ ನೀಡುವ ಬಗ್ಗೆ ಪತ್ರ ಇದೆಯೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರಲ್ಲದೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ ಚಾಲಕ ಹಾಗೂ ಬಸ್ಸಿನಲ್ಲಿದ್ದ ಇನ್ನೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅನುಮಾನಸ್ಪದವಾಗಿ ರಾತ್ರಿ ಹೊತ್ತು ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚಾರಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎನ್.ಶಶಿಕುಮಾರ್ ಅವರು ಹೇಳಿದರು.







