"ಮನೆಯೇ ಕುಸಿದಿರುವಾಗ ಪರೀಕ್ಷೆಗೆ ಹೇಗೆ ತಯಾರಾಗಲಿ"
ವಿದ್ಯಾರ್ಥಿನಿ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪುತ್ತೂರು: ಎಸೆಸೆಲ್ಸಿ ಪರೀಕ್ಷೆಗೆ ದಿನ ನಿಗದಿಯಾದ ಬೆನ್ನಲ್ಲೇ ಮನೆ ಕುಸಿದು ಬಿದ್ದು, ದುಃಸ್ಥಿತಿಯಿಂದ ಕಂಗಾಲಾಗಿರುವ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು 'ಈ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಹೇಗೆ ತಯಾರಾಗಲಿ' ಎಂದು ಅಳಲು ತೋಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಗೋಪಾಲ ಶೆಟ್ಟಿ ಎಂಬವರ ಪುತ್ರಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಎಂಬವರು ಪರೀಕ್ಷೆಯ ಸಂದರ್ಭದಲ್ಲಿಯೇ ಮನೆ ಕುಸಿದು ಸಂಕಷ್ಟಕ್ಕೆ ಒಳಗಾದ ಬಾಲಕಿ
ಎಸೆಸೆಲ್ಸಿ ಪರೀಕ್ಷಾ ದಿನಾಂಕವನ್ನು ಶಿಕ್ಷಣ ಸಚಿವರು ಘೋಷಿಸಿದ ಬೆನ್ನಲ್ಲೇ ವಿದ್ಯಾರ್ಥಿನಿ ವಾಸ್ತವ್ಯವಿರುವ ಮನೆ ಕುಸಿದು ಬಿದ್ದಿದ್ದು ಪರೀಕ್ಷೆಗೆ ಸಿದ್ಧತೆ ಮಾಡುವುದಕ್ಕಿಂತ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಈಗಾಗಲೇ ಶಿಥಿಲಗೊಂಡಿರುವ ದೀಕ್ಷಾ ಅವರ ಮನೆಯ ಒಂದು ಭಾಗ ಜೂ. 28ರಂದು ಬಿದ್ದಿದೆ. ಜತೆಗೆ ಛಾವಣಿಯೂ ಕುಸಿಯುವ ಹಂತದಲ್ಲಿದೆ. ಬಡತನದ ಈ ಕುಟುಂಬಕ್ಕೆ ಮನೆಯ ತಾತ್ಕಾಲಿಕ ದುರಸ್ತಿ ಮಾಡಲೂ ಆರ್ಥಿಕ ವ್ಯವಸ್ಥೆಗಳಿಲ್ಲ. ಟಾರ್ಪಾಲು ಹೊದೆಸಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಮನೆಯವರನ್ನು ತಾತ್ಕಾಲಿಕವಾಗಿ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ದೀಕ್ಷಾಳ ತಂದೆ ಗೋಪಾಲ ಶೆಟ್ಟಿ ಕಾಲು ನೋವಿನಿಂದ ಬಳಲುತ್ತಿದ್ದು, ದುಡಿಮೆ ಸಾಧ್ಯವಾಗುತ್ತಿಲ್ಲ. ತಾಯಿ ಬೀಡಿ ಕಟ್ಟಿ, ಕೂಲಿ ಕೆಲಸ ಮಾಡಿ ಪತಿ ಮತ್ತು ಮಕ್ಕಳಿಬ್ಬರ ಪಾಲನೆ ಮಾಡುತ್ತಿದ್ದಾರೆ. ದೀಕ್ಷಾಳ ಸಹೋದರ ವಿದ್ಯಾರ್ಥಿ. ಇಂತಹ ಪರಿಸ್ಥಿತಿಯಲ್ಲಿ ಮನೆ ಕುಸಿದಿರುವುದು ಬಾಲಕಿಯ ಭವಿಷ್ಯದ ಮೇಲೆಯೇ ಪರಿಣಾಮ ಬೀರುವಂತಾಗಿದೆ.
ಸೋಮವಾರ ಮಳೆಯಿಂದ ಮನೆಯ ಒಂದು ಭಾಗ ಕುಸಿದಿದೆ. ಛಾವಣಿಯೂ ಬೀಳುವ ಹಂತದಲ್ಲಿದೆ. ಆರ್ಥಿಕವಾಗಿ ಅನಾನುಕೂಲತೆ ಇದೆ. ಎಸೆಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು ಮನೆಯೇ ಇಲ್ಲದೆ ನಾನು ಓದುವುದಾದರೂ ಹೇಗೆ?
– ದೀಕ್ಷಾ ಶೆಟ್ಟಿ, ಎಸೆಸೆಲ್ಸಿ ವಿದ್ಯಾರ್ಥಿನಿ.
ಶಾಸಕ ಸಂಜೀವ ಮಠಂದೂರು ಭೇಟಿ
ಬನ್ನೂರು ಗ್ರಾಮದ ಕಂಬುರ್ಗದ ಗೋಪಾಲ ಶೆಟ್ಟಿ ಅವರ ಮನೆಗೆ ಇಂದು ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಅವರು ಅವರಿಗೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ . ಅಲ್ಲದೆ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಕ್ಕೂ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.







