ಎಚ್‌ಐವಿ ಸೋಂಕಿತರ ಮಕ್ಕಳಿಗೆ ಹೊಸ ಯೋಜನೆ ಜಾರಿಗೆ ಚಿಂತನೆ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲ

ಉಡುಪಿ ಜೂ.29: ಎಚ್.ಐ.ವಿ. ಸೋಂಕಿತರ ಮಕ್ಕಳಿಗೆ ಗೌರವಯುತವಾದ ಬದುಕು ರೂಪಿಸಲು ವಿದ್ಯಾರ್ಥಿ ವೇತನ ಸೇರಿದಂತೆ ಹೊಸ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳೆ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಹಿಳೆಯರ ಕಲ್ಯಾಣಾಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು. ದುರ್ಬಲ ವರ್ಗದ ಮಹಿಳೆಯರ ಅನುಕೂಲಕ್ಕೆ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗ, ವಾಣಿಜ್ಯ, ಹೈನುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುವುದರೊಂದಿಗೆ ಸ್ವಾವಲಂಭಿಗಳಾಗಬೇಕು ಎಂದರು.
ಕೇಂದ್ರ ಹಣಕಾಸು ಸಚಿವಾಲಯ ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಉದ್ಯೋಗ, ಆರೋಗ್ಯ ಮತ್ತು ಪೌಷ್ಠಿಕತೆಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಒಂದೇ ಕಡೆ ಎಲ್ಲಾ ಸಹಾಯ ಸೇವೆಗಳನ್ನು ನೀಡುವ ಸಲುವಾಗಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಅಳಲು
ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಮಲಗಲು ಜಾಗ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಕೊರೋನದಿಂದ ಮನೆ ಬಾಡಿಗೆ ಕಟ್ಟಲು ಹಣ ಇಲ್ಲ. ನಮಗೆ ಸರಕಾರ ಯಾವುದೇ ಸವಲತ್ತುಗಳನ್ನು ನೀಡಿಲ್ಲ ಎಂದು ಸಂಜೀವ ವಂಡ್ಸೆ ಹಾಗೂ ಸುದರ್ಶನ್ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ-ಉದ್ಯೋಗ, ಹೈನುಗಾರಿಕೆ ಕೈಗೊಳ್ಳಲು ಹಾಗೂ ಅವರಿಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಒದಗಿಸುವ ಕುರಿತಂತೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸರಕಾರದ ಜಮೀನು ನೀಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.
ಸ್ವ-ಉದ್ಯೋಗ ಕೈಗೊಳ್ಳಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಬ್ಸಿಡಿ ಲೋನ್ ಪಡೆದವರು ಅದನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನು ನಿಗದಿತ ಕಾಲಾವಧಿ ಒಳಗೆ ಮರುಪಾವತಿ ಮಾಡಲು ಮುಂದಾದಲ್ಲಿ ವಾಣಿಜ್ಯ ಬ್ಯಾಂಕು ಗಳು ಹೆಚ್ಚಿನ ನೆರವನ್ನು ನೀಡಲು ಸಾಧ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿಗಮದ ಮೂಲಕ ಸಾಲ ಪಡೆದು ಸ್ವಉದ್ಯೋಗದಿಂದ ಯಶಸ್ವಿಯಾದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಶೇಷಪ್ಪ, ಲೀಡ್‌ಬ್ಯಾಂಕ್ ಮ್ಯಾನೇಜರ್ ಸಿ.ರುದ್ರೇಶ್, ಜಿಪಂ ಮಾಜಿ ಸದಸ್ಯೆ ಶಿಲ್ಪಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚು ಹೆಚ್ಚು ಕಿರುಸಾಲ ನೀಡಲು ನಿರ್ಧಾರ
ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಒಂದು ಘಟಕ ನಿರ್ಮಿಸಲು ಸಹಾಯಧನವನ್ನು ನೀಡಲಾಗುವುದು. ಅದೇ ರೀತಿ 2-5ಲಕ್ಷ ರೂ. ಕಿರುಸಾಲ ಹೆಚ್ಚು ಹೆಚ್ಚು ನೀಡಲು ನಿರ್ಧರಿಸಲಾಗಿದೆ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳೆ ತಿಳಿಸಿದರು.
ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಟಾನಗೊಸಲಾದ ಯೋಜನೆಗಳಿಂದ ಉಳಿಕೆಯಾದ 12 ಕೋಟಿ ರೂ. ಹಣವನ್ನು ಮಹಿಳಾ ಅಭಿವೃದ್ಧಿ ನಿಗಮದ 24,802 ಫಲಾನುಭವಿಗಳಿಗೆ ಕೋವಿಡ್ ಸಂಕಷ್ಟದಲ್ಲಿ ತಲಾ 10,000 ರೂಗಳಂತೆ ಹಂಚಿಕೆ ಮಾಡಲಾಗಿದೆ ಎಂದರು.







