ಜೆರುಸಲೇಂನಲ್ಲಿ ಕಸಾಯಿಖಾನೆ ನೆಲಸಮಗೊಳಿಸಿದ ಇಸ್ರೇಲ್: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

photo: twitter
ಜೆರುಸಲೇಂ, ಜೂ.29: ಇಸ್ರೇಲ್ ಆಕ್ರಮಿತ ಪೂರ್ವಜೆರುಸಲೇಂನ ನೆರೆಗ್ರಾಮವಾದ ಸಿಲ್ವನ್ನಲ್ಲಿ ಕಸಾಯಿಖಾನೆಯೊಂದನ್ನು ಇಸ್ರೇಲ್ ಪಡೆಗಳು ನೆಲಸಮಗೊಳಿಸಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ವರದಿಯಾಗಿದೆ. ಬುಲ್ಡೋಝರ್ ನೆರವಿನಿಂದ ಕಸಾಯಿಖಾನೆಯನ್ನು ಇಸ್ರೇಲ್ ಪಡೆ ನೆಲಸಮಗೊಳಿಸಲು ಮುಂದಾದಾಗ ಸ್ಥಳೀಯರು ಪ್ರತಿಭಟಿಸಿ ತಡೆಯೊಡ್ಡಿದರು. ಅವರನ್ನು ಅಶ್ರುವಾಯ ಪ್ರಯೋಗಿಸಿ, ಲಾಠಿಜಾರ್ಜ್ ನಡೆಸಿ ಚದುರಿಸಲಾಯಿತು. ಈ ಸಂಘರ್ಷದಲ್ಲಿ ಕನಿಷ್ಟ 4 ಪೆಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪೆಲೆಸ್ತೀನ್ ಮೂಲಗಳು ಹೇಳಿವೆ.
ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಇಸ್ರೇಲಿ ಸೈನಿಕರು ಅಶ್ರುವಾಯು ಮತ್ತಿತರ ವಿಧಾನಗಳಿಂದ ತಮ್ಮನ್ನು ಅಲ್ಲಿಂದ ಓಡಿಸಿ ಕಸಾಯಿಖಾನೆ ನೆಲಸಮಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಇರುವ ಇತರ 20 ಕಸಾಯಿಖಾನೆಗಳಿಗೂ ಇದೇ ಪರಿಸ್ಥಿತಿ ಎದುರಾಗಿದೆ ಎಂದು ಅಂಗಡಿಯ ಮಾಲಕರು ಹೇಳಿರುವುದಾಗಿ ‘ಅಲ್ ಜಝೀರಾ’ ವರದಿ ಮಾಡಿದೆ.
ಇಸ್ರೇಲ್ ಸೈನಿಕರಿಂದ ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ಒಗ್ಗೂಡಿ ಪ್ರತಿಭಟಿಸುವಂತೆ ಆ ಪ್ರದೇಶದಲ್ಲಿದ್ದ ಮಸೀದಿಯ ಮೈಕ್ನಲ್ಲಿ ಕರೆ ನೀಡಿದಾಗ, ಇಸ್ರೇಲ್ ಸೈನಿಕರು ರಬ್ಬರ್ ಲೇಪಿಸಿದ ಸ್ಟೀಲ್ ಬುಲೆಟ್ ಗಳನ್ನು ಜನರತ್ತ ಪ್ರಯೋಗಿಸಿದ್ದಾರೆ ಎಂದು ಸ್ಥಳೀಯರು ಹೇಳಿರುವುದಾಗಿ ವರದಿಯಾಗಿದೆ. ಸಿಲ್ವನ್ ನಗರದ ಅಲ್-ಬುಸ್ತಾನ್ ಪ್ರದೇಶದಲ್ಲಿ ನೆಲಸಮ ಕಾರ್ಯಾಚರಣೆ ನಡೆಸುವುದಾಗಿ ಜೂನ್ 7ರಂದು ಜೆರುಸಲೇಂ ನಗರಪಾಲಿಕೆ ಆದೇಶ ಜಾರಿಗೊಳಿಸಿತ್ತು.
21 ದಿನದೊಳಗೆ ಸ್ವತಃ ಮನೆಯನ್ನು ಕೆಡವಿ, ಸ್ಥಳಾಂತರಗೊಳ್ಳಬೇಕು ಎಂದು ಈ ಪ್ರದೇಶದಲ್ಲಿದ್ದ ಸುಮಾರು 13 ಕುಟುಂಬಗಳಿಗೆ(ಸುಮಾರು 130 ಸದಸ್ಯರಿರುವ ಕುಟುಂಬ) ನಗರಪಾಲಿಕೆ ಸೂಚಿಸಿತ್ತು. ಇದಕ್ಕೆ ತಪ್ಪಿದಲ್ಲಿ ನಗರಪಾಲಿಕೆ ಧ್ವಂಸ ಕಾರ್ಯಾಚರಣೆ ನಡೆಸುತ್ತದೆ ಮತ್ತು ಇದಕ್ಕೆ ತಗಲುವ ವೆಚ್ಚ(ಸುಮಾರು 20,000 ಡಾಲರ್ ಮೊತ್ತ)ವನ್ನು ಆ ಮನೆಯವರೇ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.







