ತೆರಿಗೆ ಪಾವತಿಸದೆ ಸಂಚಾರ: ಖಾಸಗಿ ಬಸ್ ಆರ್‌ಟಿಓ ವಶಕ್ಕೆ

ಉಡುಪಿ, ಜೂ.29: ವಾಹನ ತೆರಿಗೆ ಪಾವತಿಸದೆ ಹಾಗೂ ಅಧ್ಯರ್ಪಣ (ಸರೆಂಡರ್)ದಿಂದ ಬಿಡುಗಡೆಗೊಳಿಸದೆ ಜೂ.28ರಂದು ಸಂಜೆ ಉಡುಪಿಯಿಂದ ಹೆಬ್ರಿ ಕಡೆಗೆ ಖಾಸಗಿ ಕಂಪೆನಿಯ ನೌಕರರನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಬಸ್ಸೊಂದನ್ನು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿ, ವಾಹನವನ್ನು ಮುಟ್ಟುಗೋಲು ಹಾಕಲಾಯಿತು. ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ ಕಚೇರಿಯ ಆವರಣದಲ್ಲಿ ನಿಲ್ಲಿಸಿ, ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಮುಂದೆ ಅನಾವಶ್ಯಕವಾಗಿ ಈ ರೀತಿಯ ತೊಂದರೆಗಳನ್ನು ಸಾರ್ವ ಜನಿಕರಿಗೆ ನೀಡದೆ, ಮುಂಗಡ ತೆರಿಗೆ ಪಾವತಿಯೊಂದಿಗೆ ಅದ್ಯಾರ್ಪಣದಿಂದ ಬಿಡುಗಡೆಗೊಳಿಸಿದ ನಂತರ ಮಾತ್ರ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





