ಬಿದ್ದಲ್ಕಟ್ಟೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸೊತ್ತು ಕಳವು
ಕೋಟ, ಜೂ.29: ಬಿದ್ದಲ್ಕಟ್ಟೆಯಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
2021ನೇ ಸಾಲಿನ ಫೆಬ್ರವರಿ ತಿಂಗಳ ಮೊದಲನೆ ವಾರದಲ್ಲಿ ಹಾಗೂ ಮಾ.16ರಂದು ರಾಜ್ಯ ಸರಕಾರದ ಆದೇಶದಂತೆ ಕಿಯೋನಿಸ್ಕ್ ಕಂಪನಿಯವರು ತಾಂತ್ರಿಕ ವೃತ್ತಿಗೆ ಸಂಬಂಧಿಸಿದಂತೆ 62 ಸರಕುಗಳನ್ನು ಒದಗಿಸಿದ್ದರು. ಈ ಸೊತ್ತುಗಳಲ್ಲಿ ಮೊದಲನೇ ಬಾರಿ ಒದಗಿಸಿದ ಸೊತ್ತುಗಳನ್ನು ಅಂಕದಕಟ್ಟೆ ಆಶ್ರಿತಾ ಕಾಂಪ್ಲೆಕ್ಸ್ ನ ಬಾಡಿಗೆ ಕಟ್ಟಡದಿಂದ ಬಿದ್ಕಲ್ಕಟ್ಟೆಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಸ್ಟೋರ್ ರೂಮ್‌ನಲ್ಲಿ ಇರಿಸಲಾಗಿತ್ತು.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಎ.27ರಿಂದ ಮುಚ್ಚಲಾಗಿತ್ತು. ಲಾಕ್‌ಡೌನ್ ಸಡಿಲಿಕೆಯಾದ ಕಾರಣ ಜೂ.22ರಂದು ಸಂಸ್ಥೆಯ ಕಛೇರಿ ಅಧಿಕ್ಷಕಿ ಸಂಸ್ಥೆಯ ಬಾಗಿಲು ತೆರೆದು ಸ್ಟೋರ್ ರೂಮ್ನ ಪರಿಶೀಲಿಸಿದಾಗ ಇಲ್ಲಿನ ಕೆಲವು ಸೊತ್ತುಗಳು ಕಳವಾಗಿರುವುದು ಕಂಡುಬಂತು. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 97,224.57ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





