ಕರ್ತವ್ಯ ನಿರತ ಆಂತರಿಕ ಭದ್ರತಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಚಾಮರಾಜನಗರ, ಜೂ.29: ಆಂತರಿಕ ಭದ್ರತಾ ಸಿಬ್ಬಂದಿಯೊಬ್ಬರು ಕರ್ತವ್ಯ ವೇಳೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸ್ಯಾಟಲೈಟ್ ಮೊಬೈಲ್ ಬಳಕೆಯಾಗಿರುವ ಬಗ್ಗೆ ಬಂದಿರುವ ಮಾಹಿತಿಯನ್ನು ಆಧರಿಸಿದ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ತನಿಖೆ ಚುರುಕುಗೊಳಿಸಿದ್ದರು.
ಈ ನಡುವೆ ತನಿಖೆಗೆಂದು ಆಂತರಿಕ ಭದ್ರತಾ ಸಿಬ್ಬಂದಿ ಬಾಬು ರವರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ಗ್ರಾಮಕ್ಕೆ ತೆರಳಿ ಪರಿಶೀಲಿಸುವಾಗ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಬಂಡಳ್ಳಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಹನೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಬಾಬುರವರನ್ನು ಬಂಡಳ್ಳಿಯಿಂದ ಹನೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತ ಬಾಬು ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದವರಾಗಿದ್ದು, ಕಳೆದ 6 ವರ್ಷಗಳಿಂದ ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಬಾಬು ರವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹವಾಗಿತ್ತು.





