ಧಾರ್ಮಿಕ ಸಹಿಷ್ಣುತೆಗೆ ಬಹುತೇಕ ಭಾರತೀಯರ ಒಲವು ಆದರೆ ವಿವಾಹ, ವಸತಿ ಪ್ರದೇಶ ವಿಷಯದಲ್ಲಿ ಸ್ವಧರ್ಮೀಯರಿಗೆ ಆದ್ಯತೆ
‘ಪ್ಯೂ’ ಸಮೀಕ್ಷಾ ವರದಿ

ಹೊಸದಿಲ್ಲಿ,ಜು.29: ಭಾರತೀಯರು ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಉತ್ಸುಕತೆಯನ್ನು ಪ್ರದರ್ಶಿಸುತ್ತಾರಾದರೂ, ವಿವಾಹ ಹಾಗೂ ವಸತಿ ಪ್ರದೇಶಗಳ ವಿಷಯದಲ್ಲಿ ತಮ್ಮ ಧಾರ್ಮಿಕ ಸಮುದಾಯದೊಳಗೆ ಸೀಮಿತವಾಗಿರಲು ಬಯಸುತ್ತಾರೆಂದು ಅಮೆರಿಕದ ಮೂಲದ ಪ್ಯೂ ರಿಸರ್ಚ್ ಸೆಂಟರ್ನ ಸಮೀಕ್ಷಾ ವರದಿ ತಿಳಿಸಿದೆ.
ನೈಜ ಭಾರತೀಯನಾಗಿರಲು ಇತರ ಧರ್ಮಗಳನ್ನು ಗೌರವಿಸುವುದು ಅತ್ಯಂತ ಮುಖ್ಯವೆಂದು ತಾವು ಭಾವಿಸುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.85ರಷ್ಟು ಹಿಂದೂಗಳು, ಶೇ.78ರಷ್ಟು ಮುಸ್ಲಿಮರು, ಶೇ.78ರಷ್ಟು ಕ್ರೈಸ್ತರು, ಶೇ.81ರಷ್ಟು ಸಿಖ್ಖರು, ಶೇ.84ರಷ್ಟು ಬೌದ್ಧರು ಹಾಗೂ ಶೇ.83ರಷ್ಟು ಜೈನರು ಭಾವಿಸಿದ್ದಾರೆಂದು ಸಮೀಕ್ಷಾ ವರದಿ ಹೇಳಿದೆ.
ಶೇ.66ರಷ್ಟು ಹಿಂದೂಗಳು ಹಾಗೂ ಶೇ.64ರಷ್ಟು ಮುಸ್ಲಿಮರು ಕರ್ಮ ಸಿದ್ಧಾಂತವನ್ನು ನಂಬುತ್ತಾರೆ.ಆದಾಗ್ಯೂ ಶೇ.66ರಷ್ಟು ಹಿಂದೂಗಳು ಹಾಗೂ ಶೇ.64ರಷ್ಟು ಮುಸ್ಲಿಮರು ತಾವು ಪರಸ್ಪರ ವಿಭಿನ್ನರೆಂದು ಪರಿಗಣಿಸುತ್ತಾರೆ. ಮೂರನೆ ಎರಡರಷ್ಟು ಜೈನರು ಹಾಗೂ ಅರ್ಧಾಂಶದಷ್ಟು ಸಿಖ್ಖರು ತಾವು ಹಿಂದೂಗಳ ಜೊತೆ ಧಾರ್ಮಿಕವಾಗಿ ಸಾಮ್ಯತೆಯನ್ನು ಹೊಂದಿದ್ದೇವೆಂದು ಭಾವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಪ್ರತಿ ಮೂರು ಹಿಂದೂಗಳಲ್ಲಿ ಒಬ್ಬಾತ ಮುಸ್ಲಿಂ ವ್ಯಕ್ತಿಯು ತನ್ನ ನೆರೆಹೊರೆಯವನಾಗಿರುವುದನ್ನು ಬಯಸುವುದಿಲ್ಲ. ಭಾರತೀಯನಾಗಿರುವುದಕ್ಕಿಂತಲೂ ಹೆಚ್ಚಾಗಿ ಹಿಂದೂವಾಗಿರುವುದು ಹೆಚ್ಚು ಮುಖ್ಯವೆಂದು ಅರ್ಧಾಂಶಕ್ಕಿಂತಲೂ ಹೆಚ್ಚು ಹಿಂದೂಗಳು ಭಾವಿಸುತ್ತಾರೆ. ಮುಸ್ಲಿಮರು ಹಾಗೂ ಸಿಖ್ಖರು ಭಾರತ ವಿಭಜನೆಯನ್ನು ಇಷ್ಟಪಡುತ್ತಿಲ್ಲವಾದರೂ, ಹೆಚ್ಚಿನ ಹಿಂದೂಗಳು ದೇಶವಿಭಜನೆಯಿಂದ ಒಳ್ಳೆಯದಾಯಿತೆಂದು ಭಾವಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
2019ರಿಂದ ನವೆಂಬರ್ 17ರಿಂದ 2020ರ ಮಾರ್ಚ್ 23ರ ನಡುವೆ 17 ಭಾಷೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸ ಲಾಗಿದ್ದು, 29,999 ಮಂದಿಯನ್ನು ಮುಖಾಮುಖಿಯಾಗಿ ಸಂದರ್ಶಿಸಲಾಗಿತ್ತು.
ಸಮೀಕ್ಷೆಯಲ್ಲಿ 22,975 ಹಿಂದೂಗಳು, 3,336 ಮುಸ್ಲಿಮರು, 1,782 ಸಿಖ್ಖರು, 1,011 ಕ್ರೈಸ್ತರು, 719 ಬೌದ್ಧರು, 109 ಜೈನರು ಹಾಗೂ ಇತರ ಧರ್ಮಗಳ ಅಥವಾ ಯಾವುದೇ ಧರ್ಮದೊಂಂದಿಗೆ ಗುರುತಿಸಲ್ಪಡದೆ ಇರುವ 67 ಮಂದಿ ಪಾಲ್ಗೊಂಡಿದ್ದರು.
ಪ್ರತಿ ಮೂರು ಮಂದಿ ಹಿಂದೂಗಳಲ್ಲಿ ಒಬ್ಬಾತ (ಶೇ.36 ಮಂದಿ) ಮುಸ್ಲಿಮನು ನೆರೆಮನೆಯಲ್ಲಿರಲು ಬಯಸುವುದಿಲ್ಲವೆಂದು ಸಮೀಕ್ಷೆ ತಿಳಿಸಿದೆ. ಶೇ.61ರಷ್ಟು ಜೈನರು ತಮ್ಮ ನೆರೆಹೊರೆಯಲ್ಲಿ ಮುಸ್ಲಿಂ, ಕ್ರೈಸ್ತ, ಸಿಖ್ಖ್, ಬೌದ್ಧ ಸೇರಿದಂತೆ ಇತರ ಧರ್ಮದ ಯಾರೂ ಕೂಡಾ ತಮ್ಮ ನೆರೆಹೊರೆ ಯಲ್ಲಿರಲು ಬಯಸುವುದಿಲ್ಲ.
ಶೇ.54ರಷ್ಟು ಜೈನರು ತಾವು ಮುಸ್ಲಿಂ ನೆರೆಹೊರೆಯವನನ್ನು ಒಪ್ಪಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.92ರಷ್ಟು ಜೈನರು ಹಿಂದೂ ನೆರೆಹೊರೆಯಾತನನ್ನು ಒಪ್ಪಿಕೊಳ್ಳುತ್ತೇವೆಂದು ಹೇಳಿದ್ದಾರೆ. ಶೇ. 78ರಷ್ಟು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳು ತಾವು ಹಿಂದೂಗಳ ಸಮೀಪ ವಾಸಿಸುವುದನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
ವಿವಾಹದ ವಿಷಯದಲ್ಲಿ ಶೇ.67ರಷ್ಟು ಹಿಂದೂಗಳು ತಮ್ಮ ಸಮುದಾಯದ ಮಹಿಳೆಯರು ಅಂತರ್ ಧರ್ಮೀಯ ವಿವಾಹವಾಗುವುದನ್ನು ತಡೆಯಲು ಬಯಸುತ್ತಾರೆ. ಅವರಲ್ಲಿ ಶೇ.65ರಷ್ಟು ಮಂದಿ ಹಿಂದೂ ಪುರುಷರು ಕೂಡಾ ಅಂತರ್ಧರ್ಮೀಯ ವಿವಾಹವಾಗುವುದನ್ನು ವಿರೋಧಿಸುತ್ತಾರೆ.
ಶೇ.80ರಷ್ಟು ಮುಸ್ಲಿಮರು ತಮ್ಮ ಸಮದಾಯದ ಮಹಿಳೆಯರು, ಅನ್ಯ ಧರ್ಮಿಯರನ್ನು ವಿವಾಹವಾಗುವುದನ್ನು ತಡೆಯುವುದು ಮುಖ್ಯವೆಂದು ಹೇಳುತ್ತಾರೆ ಹಾಗೂ ಅವರಲ್ಲಿ ಶೇ.76ರಷ್ಟು ಮಂದಿ ಮುಸ್ಲಿಂ ಪುರುಷರು ಅಂತರ್ ಧರ್ಮೀಯ ವಿವಾಹವನ್ನು ಕೂಡಾ ವಿರೋಧಿಸುತ್ತಾರೆ.
ಶೇ.74ರಷ್ಟು ಮುಸ್ಲಿಮರು ಈಗ ಇರುವ ಜಾತ್ಯತೀತ ನ್ಯಾಯಾಲಯಗಳ ಜೊತೆಗೆ ಇಸ್ಲಾಮಿಕ್ ನ್ಯಾಯಾಲಯದ ವ್ಯವಸ್ಥೆಯನ್ನು ಕೂಡಾ ಇರಬೇಕೆಂದು ಬಯಸುತ್ತಾರೆಂದು ಸಮೀಕ್ಷೆ ತಿಳಿಸಿದೆ







