2ನೇ ಬಾರಿಯೂ ವಿಚಾರಣೆಗೆ ಗೈರಾದ ಅನಿಲ್ ದೇಶ್ಮುಖ್

ಮುಂಬೈ, ಜೂ.29: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶ್ಮುಖ್ ಗೆ ಜಾರಿ ನಿರ್ದೇಶನಾಲಯ 2ನೇ ಬಾರಿ ಸಮನ್ಸ್ ನೀಡಿದ್ದರೂ, ವೃದ್ಧಾಪ್ಯ ಮತ್ತು ಕೊರೋನ ಸೋಂಕಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ವಿಚಾರಣೆಗೆ ಗೈರುಹಾಜರಾಗಿದ್ದರು ಎಂದು ವರದಿಯಾಗಿದೆ.
ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಮತ್ತು ತನಿಖಾ ಸಂಸ್ಥೆಗಳಿಗೆ ಸೂಕ್ತ ಎನಿಸುವ ದಿನದಂದು ವರ್ಚುವಲ್ ವಿಧಾನದಲ್ಲಿ ವಿಚಾರಣೆ ನಡೆಸಬೇಕು ಎಂಬ ಕೋರಿಕೆಯನ್ನು ತನ್ನ ವಕೀಲರ ಮೂಲಕ ದೇಶ್ಮುಖ್ ಮುಂದಿಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಶನಿವಾರ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ಸಮನ್ಸ್ ಪಾಲಿಸದಿದ್ದ ದೇಶ್ಮುಖ್, ಹೊಸ ದಿನಾಂಕ ನಿಗದಿಗೆ ಕೋರಿದ್ದರು. ಅದರಂತೆ ಮಂಗಳವಾರ (ಜೂ.29) ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸುವಂತೆ ಮತ್ತೊಂದು ಸಮನ್ಸ್ ಜಾರಿಯಾಗಿತ್ತು. ಆದರೆ ಈ ಬಾರಿಯೂ ಸಮನ್ಸ್ ಪಾಲಿಸಲು ವಿಫಲವಾಗಿರುವ ದೇಶ್ಮುಖ್, ತನ್ನ ವಕೀಲ ಇಂದರ್ಪಾಲ್ ಸಿಂಗ್ರನ್ನು ತನ್ನ ಪ್ರತಿನಿಧಿಯಾಗಿ ಕಳಿಸಿದ್ದು ಅವರೊಂದಿಗೆ ಪತ್ರವನ್ನೂ ರವಾನಿಸಿದ್ದಾರೆ.
ನನಗೆ 71 ವರ್ಷವಾಗಿದ್ದು ವೃದ್ದಾಪ್ಯ ಮತ್ತು ರಕ್ತದೊತ್ತಡ, ಹೃದಯ ಸಂಬAಧಿ ಕಾಯಿಲೆಯಿದೆ. ಜೊತೆಗೆ ಕೊರೋನ ಸೋಂಕಿನಿAದ ವಿಚಾರಣೆಗೆ ಬರಲು ಆಗುತ್ತಿಲ್ಲ. ನಾನು ಕಾನೂನು ಪಾಲಿಸುವ ವ್ಯಕ್ತಿಯಾಗಿದ್ದು ನನ್ನ ವಿರುದ್ಧ ದಾಖಲಿಸಿರುವ ಸುಳ್ಳು, ದುರುದ್ದೇಶಪೂರಿತ, ಪೊಳ್ಳು ಆರೋಪವನ್ನು ಸುಳ್ಳು ಮಾಡುವ ವಿಶ್ವಾಸ ನನಗಿದೆ. ನನ್ನ ವಿರುದ್ಧ ದಾಖಲಾಗಿರುವ ಇಸಿಐಆರ್(ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಶನ್ ರಿಪೋರ್ಟ್) ಹಾಗೂ ಇತರ ದಾಖಲೆಗಳ ಪ್ರತಿಯನ್ನು ನೀಡಬೇಕು' ಎಂದವರು ಪತ್ರದಲ್ಲಿ ಕೋರಿದ್ದಾರೆ.







