ಕಾಸರಗೋಡಿನ ಗ್ರಾಮಗಳ ಹೆಸರು ಬದಲಾಯಿಸಲು ಚಿಂತನೆ ನಡೆಸಿಲ್ಲ: ಕೇರಳ ಸರಕಾರ ಸ್ಪಷ್ಟನೆ
''ಹೆಸರು ಬದಲಾವಣೆ ಸುದ್ದಿಯ ಹಿಂದೆ ಸಂಘಪರಿವಾರದ ಕೈವಾಡ''

ಕಾಸರಗೋಡು, ಜೂ.29: ಕಾಸರಗೋಡಿನ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸುವ ಕುರಿತ ವರದಿಗಳು ಸಾಕಷ್ಟು ಚರ್ಚೆ ಹಾಗೂ ಪ್ರತಿಭಟನೆಗೆ ಎಡೆಮಾಡಿಕೊಟ್ಟಿರುವ ಮಧ್ಯೆಯೇ ಈ ಬಗ್ಗೆ ಯಾವುದೇ ಸುತ್ತೋಲೆ, ಆದೇಶ ಹೊರಡಿಸಿಲ್ಲ ಎಂದು ಕೇರಳ ಸರಕಾರ ಸ್ಪಷ್ಟಪಡಿಸಿದೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಕೆಲವು ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎಂಬ ಸುದ್ದಿಯೊಂದು ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಇದರ ವಿರುದ್ಧ ಕಾಸರಗೋಡಿನ ಕನ್ನಡಿಗರು ಹಾಗೂ ಕರ್ನಾಟಕದ ಪ್ರಮುಖ ನಾಯಕರು ಕೇರಳ ಸರಕಾರದ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಂತಾದವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಪತ್ರ ಕೂಡಾ ಬರೆದಿದ್ದಾರೆ. ಈ ನಡುವೆ ಇಂತಹ ಯಾವುದೇ ನಿರ್ಧಾರ ತೆಗೆದು ಕೊಂಡಿಲ್ಲ. ಈ ವರದಿಯ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ.
ಹೆಸರು ಬದಲಾವಣೆಗೆ ಚಿಂತಿಸಿಲ್ಲ: ಪಿಣರಾಯಿ
ಕಾಸರಗೋಡಿನ ಗ್ರಾಮಗಳ ಹೆಸರುಗಳನ್ನೂ ಬದಲಾಯಿಸಲು ಚಿಂತನೆ ನಡೆಸಿಲ್ಲ. ವಿನಾ ಕಾರಣ ಅಪಪ್ರಚಾರ ಹಾಗೂ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಹೆಸರು ಬದಲಾವಣೆ ಸುದ್ದಿಯ ಹಿಂದೆ ಸಂಘ ಪರಿವಾರದ ಕೈವಾಡ ಸಂಶಯ ಉಂಟಾಗಿದೆ ಎಂದು ಕಂದಾಯ ಸಚಿವ ಕೆ.ರಾಜನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಂಘ ಪರಿವಾರ ಇಲ್ಲ ಸಲ್ಲದ ಅಪಪ್ರಚಾರ ನಡೆಸಿದ್ದು, ಇದನ್ನು ಕರ್ನಾಟಕದ ಬಿಜೆಪಿ ನಾಯಕರು ಕೈಗೆತ್ತಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುವ ಯತ್ನ ನಡೆಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಝ್ ಆರೋಪಿಸಿದ್ದಾರೆ.







