ಹೊಸ ಸಿನಿಮಾ ನೀತಿಗೆ ಕಮಲಹಾಸನ್ ವಿರೋಧ

ಚೆನ್ನೈ, ಜೂ.29: ಈಗಾಗಲೇ ಪ್ರಮಾಣಪತ್ರ ಪಡೆದ ಸಿನೆಮಾದ ಮರುಪರಿಶೀಲನೆಗೆ ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುವ ಚಲನಚಿತ್ರ(ತಿದ್ದುಪಡಿ) ಕರಡು ಮಸೂದೆಗೆ ನಟ- ರಾಜಕಾರಣಿ ಕಮಲಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿನೆಮ, ಮಾಧ್ಯಮ ಮತ್ತು ಬುದ್ಧಿಜೀವಿಗಳು ಭಾರತದ ಮೂರು ಅಪ್ರತಿಮ ಮಂಗಗಳಂತೆ ಇರಲು ಸಾಧ್ಯವಿಲ್ಲ. ನೋಡುವುದು, ಕೇಳುವುದು ಮತ್ತು ಮಾತನಾಡುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನದ ವಿರುದ್ಧ ಇರುವ ಏಕೈಕ ಚಿಕಿತ್ಸೆಯಾಗಿದೆ ಎಂದು ಕಮಲಹಾಸನ್ ಟ್ವೀಟ್ ಮಾಡಿದ್ದಾರೆ. ಸ್ವಾತಂತ್ರ್ಯ ಮತ್ತು ಅಭಿವ್ಯಕ್ತ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದವರು ಆಗ್ರಹಿಸಿದ್ದಾರೆ.
ಮಸೂದೆಯ ಮೂಲಕ ಸೆಕ್ಷನ್ 5ಬಿ(1)ರ ಉಲ್ಲಂಘನೆಯಾಗುವುದನ್ನು ತಡೆಯಲು ಸರಕಾರಕ್ಕೆ ಅವಕಾಶವಿರುತ್ತದೆ ಎಂದು ಹೇಳಿದ್ದ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ, ಕರಡು ಮಸೂದೆಯ ಕುರಿತು ಸಲಹೆ ನೀಡುವಂತೆ ಜೂನ್ ೧೮ರಂದು ಜನರನ್ನು ಆಹ್ವಾನಿಸಿತ್ತು. ಪ್ರಮಾಣಪತ್ರದ ಷರತ್ತು ಉಲ್ಲಂಘಿಸಿ ಸಿನೆಮ ಪ್ರಸಾರ ಮಾಡದಂತೆ ಸೆಕ್ಷನ್ 5ಬಿ(1)ರಲ್ಲಿ ಸೂಚಿಸಲಾಗಿದೆ.
ಈ ಪ್ರಸ್ತಾವಿತ ನಿಯಮವು ತೆರೆಮರೆಯಲ್ಲಿ ಸೆನ್ಸಾರ್ಶಿಪ್ ವಿಧಿಸುವ ಮತ್ತೊಂದು ಪ್ರಯತ್ನವಾಗಿದೆ ಎಂದು ಹಲವು ಸಿನೆಮ ನಿರ್ಮಾಪಕರು ಟೀಕಿಸಿದ್ದಾರೆ.







