ಲಸಿಕೆ ಪಡೆದ ಭಾರತೀಯರು ಇನ್ನು ಮುಂದೆ ಸ್ವಿಟ್ಸರ್ಲ್ಯಾಂಡ್ ಪ್ರವೇಶಿಸಬಹುದು

ಝೂರಿಕ್ (ಸ್ವಿಟ್ಸರ್ಲ್ಯಾಂಡ್), ಜೂ. 29: ಸ್ವಿಟ್ಸರ್‌ಲ್ಯಾಂಡ್ ನಲ್ಲಿ ಕೋವಿಡ್-19 ಸಂಬಂಧಿ ನಿರ್ಬಂಧಗಳನ್ನು ಜೂನ್ 26ರಿಂದ ಸಡಿಲಿಸಲಾಗಿದೆ. ಭಾರತದಂಥ ಕಳವಳಕಾರಿ ಕೊರೋನ ವೈರಸ್ ಪ್ರಭೇದ ಹೊಂದಿರುವ ದೇಶಗಳ ಜನರು ಲಸಿಕೆ ತೆಗೆದುಕೊಂಡಿದ್ದರೆ ಅಥವಾ ಕೋವಿಡ್-19 ಸಾಂಕ್ರಾಮಿಕದಿಂದ ಚೇತರಿಸಿಕೊಂಡಿದ್ದರೆ ಅವರಿಗೆ ದೇಶಕ್ಕೆ ಬರಲು ಅವಕಾಶ ನೀಡಲಾಗುವುದು ಹಾಗೂ ಅವರು ಕೊರೋನ ಇಲ್ಲ ಎಂಬ ವೈದ್ಯಕೀಯ ಪ್ರಮಾಣಪತ್ರವನ್ನು ತರುವ ಅಥವಾ ಕ್ವಾರಂಟೈನ್ ಗೆ ಒಳಗಾಗುವ ಅಗತ್ಯವಿಲ್ಲ ಎಂದು ಸರಕಾರದ ಕೇಂದ್ರೀಯ ಸಾರ್ವಜನಿಕ ಆರೋಗ್ಯ ಸಮಿತಿ ಹೇಳಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅದೇ ವೇಳೆ ಲಸಿಕೆಯನ್ನೂ ತೆಗೆದುಕೊಳ್ಳದವರು ಮತ್ತು ಸಾಂಕ್ರಾಮಿಕದಿಂದ ಚೇತರಿಸಿಯೂಕೊಳ್ಳದವರು ನೆಗೆಟಿವ್ ಪಿಸಿಆರ್ ಪರೀಕ್ಷೆ ಅಥವಾ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ವರದಿಯನ್ನು ಸಲ್ಲಿಸಬೇಕು ಮತ್ತು ದೇಶವನ್ನು ಪ್ರವೇಶಿಸಿದ ಬಳಿಕ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸಮಿತಿ ಹೇಳಿದೆ.
‘‘ಸ್ವಿಟ್ಸರ್‌ಲ್ಯಾಂಡ್ ನಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಡೆಲ್ಟಾ ಪ್ರಭೇದದ ವಿರುದ್ಧ ಸ್ವಲ್ಪ ಮಾತ್ರ ಕಡಿಮೆ ಪರಿಣಾಮಕಾರಿಯಾಗಿವೆ. ಅವುಗಳು ಈಗಲೂ ಅತ್ಯಂತ ಉನ್ನತ ಮಟ್ಟದ ರಕ್ಷಣೆಯನ್ನು ಕೊಡುತ್ತಿವೆ’’ ಎಂದು ಮಂಡಳಿ ಹೇಳಿದೆ ಎಂದು ಎಎನ್ಐ ತಿಳಿಸಿದೆ.







