ಉದ್ಯೋಗ ಭಡ್ತಿಯಲ್ಲೂ ಅಂಗವಿಕಲರಿಗೆ ಮೀಸಲಾತಿ ಅನ್ವಯ ಸುಪ್ರೀಂಕೋರ್ಟ್ ತೀರ್ಪು

ಹೊಸದಿಲ್ಲಿ,ಜೂ.21: ಉದ್ಯೋಗದಲ್ಲಿ ಭಡ್ತಿಯಲ್ಲಿ ಅಂಗವಿಕಲರಿಗೆ ಮೀಸಲಾತಿಯು ಅನ್ವಯವಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದಾಗಿ ಬಾರ್ ಆ್ಯಂಡ್ ಬೆಂಚ್ ಮಂಗಳವಾರ ವರದಿ ಮಾಡಿದೆ.
ಅಂಗವಿಕಲ ಉದ್ಯೋಗಿಗಳು ವಿಕಲಾಂಗ ಕೋಟಾದಡಿ ನೇಮಕಗೊಂಡಿರಲಿ ಅಥವಾ ಇಲ್ಲದೇ ಇರಲಿ, ಭಡ್ತಿ ದೊರೆಯುವ ಸಂದರ್ಭದಲ್ಲಿ ಅವರಿಗೆ ಮೀಸಲಾತಿಯ ಪ್ರಯೋಜನಗಳನ್ನು ನಿರಾಕರಿಸಲು ಸಾಧ್ಯವಲ್ಲವೆಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಆರ್.ಸುಭಾಶ್ ರೆಡ್ಡಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಿಸಿದೆ.
ಭಡ್ತಿ ಮೀಸಲಾತಿಗೆ ಸಂಬಂಧಿಸಿ ಕೇರಳ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದ ಸರಕಾರಿ ಉದ್ಯೋಗಿ ಲೀಸಮ್ಮ ಅವರು ತನಗೆ ಅಂಗವಿಕಲ ಮೀಸಲಾತಿಯಲ್ಲಿ ಭಡ್ತಿ ದೊರೆಯಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಲೇರಿದ್ದರು. ಪೊಲೀಸ್ ಉದ್ಯೋಗಿಯಾಗಿದ್ದ ತನ್ನ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ನೆಲೆಯಲ್ಲಿ ಲೀಸಮ್ಮ ಟೈಪಿಸ್ಟ್/ಗುಮಾಸ್ತ ಹುದ್ದೆಗೆ ನೇಮಕಗೊಂಡಿ ದ್ದರು.2015ರಲ್ಲಿ ಅವರನ್ನು ಕ್ಯಾಶಿಯರ್ ಆಗ ನೇಮಕಗೊಳಿಸಲಾಗಿತ್ತು. ಆದರೆ ತನಗೆ 2002ರ ಜುಲೈ 1ರಿಂದ ಅನ್ವಯವಾಗುವಂತೆ ಅಂಗವಿಕಲ ಮೀಸಲಾತಿಯಡಿ ಭಡ್ತಿ ನೀಡಬೇಕೆಂದು ಕೋರಿ ಲೀಸಮ್ಮ ಹೈಕೋರ್ಟ್ ಮೆಟ್ಟಲೇರಿದ್ದರು.
ಆದರೆ ಲೀಸಮ್ಮ ಅನುಕಂಪದ ನೆಲೆಯಲ್ಲಿ ಭಡ್ತಿಗೊಂಡಿರುವುದರಿಂದ ಅಂಗವಿಕಲರಿಗಾಗಿನ ಮೀಸಲಾತಿಯಡಿ ಭಡ್ತಿ ನೀಡಲು ಸಾಧ್ಯವಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಲೀಸಮ್ಮ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಉದ್ಯೋಗಿಯ ಭಡ್ತಿಗೆ ಆತನ ನೇಮಕಾತಿಯ ಮೂಲವು ಮುಖ್ಯವಾಗುವುದಿಲ್ಲ. ಭಡ್ತಿಗೆ ಪರಿಗಣನೆಯಾಗುವ ಕಾಲದಲ್ಲಿ ಉದ್ಯೋಗಿಯು ಅಂಗವಿಕಲನಾಗಿದ್ದನೆಯೇ ಎಂಬುದು ಪರಿಗಣಿಸಲ್ಪಡುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿತು.







