ಇಸ್ರೇಲ್ ಸಚಿವ ಯಾಯಿರ್ ಲ್ಯಾಪಿಡ್ ‘ಐತಿಹಾಸಿಕ’ ಯುಎಇ ಭೇಟಿ ಆರಂಭ

ಜೆರುಸಲೇಂ, ಜೂ.29: ಇಸ್ರೇಲ್ನ ವಿದೇಶ ವ್ಯವಹಾರ ಸಚಿವ ಯಾಯಿರ್ ಲ್ಯಾಪಿಡ್ ರ ‘ಐತಿಹಾಸಿಕ’ ಯುಎಇ ಭೇಟಿ ಮಂಗಳವಾರದಿಂದ ಆರಂಭವಾಗಿದ್ದು , ಯುಎಇಗೆ ಅಧಿಕೃತ ಭೇಟಿ ನೀಡಿದ ಪ್ರಪ್ರಥಮ ಇಸ್ರೇಲ್ ಸಚಿವ ಎಂಬ ದಾಖಲೆ ಲ್ಯಾಪಿಡ್ ಅವರದ್ದಾಗಿದೆ.
ವಿಮಾನದೊಳಗೆ ಕುಳಿತಿರುವ ಫೋಟೋ ಟ್ವೀಟ್ ಮಾಡಿರುವ ಲ್ಯಾಪಿಡ್, ಯುಎಇಗೆ ಚಾರಿತ್ರಿಕ ಭೇಟಿಗೆ ತೆರಳುತ್ತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಇಸ್ರೇಲ್‌ನ ಸಚಿವರು ಗಲ್ಫ್ ರಾಷ್ಟ್ರಗಳಿಗೆ ಹಲವು ಬಾರಿ ಭೇಟಿ ನೀಡಿದ್ದರು. ಆದರೆ ಯುಎಇಗೆ ಇಸ್ರೇಲ್ ಸಚಿವರು ಇದೇ ಮೊದಲ ಬಾರಿ ಭೇಟಿ ನೀಡಿದ್ದಾರೆ. ಯುಎಇ ಭೇಟಿ ಸಂದರ್ಭ ಅಬುಧಾಬಿಯಲ್ಲಿ ಇಸ್ರೇಲ್ನ ರಾಯಭಾರಿ ಕಚೇರಿ ಹಾಗೂ ದುಬೈಯಲ್ಲಿ ಇಸ್ರೇಲ್‌ನ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಲ್ಯಾಪಿಡ್ ಉದ್ಘಾಟಿಸಲಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಹದಗೆಟ್ಟಿದ್ದ ಇಸ್ರೇಲ್- ಯುಎಇ ನಡುವಿನ ಸಂಬಂಧ ಕಳೆದ ಸೆಪ್ಟಂಬರ್ ನಲ್ಲಿ ಸಾಮಾನ್ಯ ಸ್ಥಿತಿಗೆ ಬಂದಿದೆ. ಬಳಿಕ ಉಭಯ ದೇಶಗಳ ಮಧ್ಯೆ ಪ್ರವಾಸೋದ್ಯಮ, ವಿಮಾನಯಾನ, ಆರ್ಥಿಕ ಸೇವೆ ಸಹಿತ ಹಲವು ಒಪ್ಪಂದಗಳಿಗೆ ಸಹಿ ಬಿದ್ದಿದೆ. ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಳೆದ ಮಾರ್ಚ್ ನಲ್ಲಿ ಯುಎಇಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಜೋರ್ಡನ್ ನ ವಾಯುಪ್ರದೇಶ ಬಳಕೆಯ ಕುರಿತ ವಿವಾದದಿಂದ ಈ ಪ್ರವಾಸ ರದ್ದಾಗಿತ್ತು.
ನೆತನ್ಯಾಹು ರಾಜೀನಾಮೆ ನೀಡಿದ ಬಳಿಕ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರದ ಅಧ್ಯಕ್ಷರಾಗಿ ಯೆಹೂದಿ ರಾಷ್ಟ್ರೀಯ ನಫ್ತಾಲಿ ಬೆನ್ನೆಟ್ ನಿಯೋಜನೆಗೊಳ್ಳುವುದರಲ್ಲಿ ಲ್ಯಾಪಿಡ್ ಪ್ರಮುಖ ಪಾತ್ರ ವಹಿಸಿದ್ದರು. ಇಸ್ರೇಲ್-ಯುಇಎ ಒಪ್ಪಂದವನ್ನು ಪೆಲೆಸ್ತೀನ್ ಖಂಡಿಸಿದ್ದು, ಪೆಲಸ್ತೀನ್ ನೊಂದಿಗೆ ಶಾಂತಿ ಕಾಯ್ದುಕೊಳ್ಳದ ತನಕ ಇಸ್ರೇಲ್ ನೊಂದಿಗೆ ಯಾವುದೇ ಸಂಬಂಧ ಹೊಂದಿರಬಾರದು ಎಂದು ಆಗ್ರಹಿಸಿದೆ.







