ಹೆಚ್ಚುತ್ತಿರುವ ಇಂಧನ ಬೆಲೆ ಸಮಸ್ಯೆ ನಿಭಾಯಿಸಲು ಸೈಕಲ್ ಸವಾರಿ ಮಾಡಿ ಎಂದ ಮಧ್ಯಪ್ರದೇಶದ ಇಂಧನ ಸಚಿವ
"ಸೈಕಲ್ ಸವಾರಿಯು ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಮಾಲಿನ್ಯವನ್ನು ಕೊನೆಗೊಳಿಸುತ್ತದೆ"

ಇಂಧನ ಸಚಿವ ಪ್ರಧೂಮನ್ ಸಿಂಗ್ ತೋಮರ್ (Photo: FACEBOOK)
ಇಂದೋರ್ : ಹೆಚ್ಚುತ್ತಿರುವ ಇಂಧನ ದರಗಳ ಸಮಸ್ಯೆಯನ್ನು ನಿಭಾಯಿಸಲು ಜನರು ಸೈಕಲ್ ಸವಾರಿ ಮಾಡಬೇಕೆಂದು ಮಧ್ಯಪ್ರದೇಶ ಇಂಧನ ಸಚಿವ ಪ್ರಧೂಮನ್ ಸಿಂಗ್ ತೋಮರ್ ಮಂಗಳವಾರ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
"ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಯಾರು ಬಳಸುತ್ತಾರೆ?. ನಾವು ತರಕಾರಿ ಮಾರುಕಟ್ಟೆಗೆ ಸೈಕಲ್ ಮೂಲಕ ಹೋಗುತ್ತೇವೆಯೇ? ಸೈಕಲ್ ಸವಾರಿಯು ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಹಾಗೂ ಮಾಲಿನ್ಯವನ್ನು ಕೊನೆಗೊಳಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ನಮಗೆ ಅಥವಾ ದೇಶದ ಆರೋಗ್ಯ ಸೇವೆಗಳಿಗೆ ಹೆಚ್ಚು ಮಹತ್ವಪೂರ್ಣವೇ?” ಎಂದು ತೋಮರ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸೈಕ್ಲಿಂಗ್ ಅಭ್ಯಾಸವನ್ನೂ ನಾನು ಅಳವಡಿಸಿಕೊಂಡಿದ್ದೇನೆ. ನೀವು ನನ್ನ ಡೈರಿಯನ್ನು 30 ದಿನಗಳವರೆಗೆ ಪರಿಶೀಲಿಸಿದರೆ ನಾನು ಎಷ್ಟು ದಿನ ನಡೆಯುತ್ತೇನೆ, ಕಾರಿನಲ್ಲಿ ಅಥವಾ ಸೈಕಲ್ನಲ್ಲಿ ಹೋಗುತ್ತೇನೆ ಎಂದು ನಿಮಗೆ ತಿಳಿಯುತ್ತದೆ" ಎಂದು ಸಚಿವರು ಹೇಳಿದರು.
ಇಂಧನವು ಹೆಚ್ಚು ದುಬಾರಿಯಾಗುತ್ತಿದೆ ಎಂದು ಒಪ್ಪಿಕೊಂಡ ತೋಮರ್ ಅದರಿಂದ ಬರುವ ಆದಾಯದಿಂದ ರಾಜಕಾರಣಿಗಳಿಗೆ ಪ್ರಯೋಜನವಾಗುತ್ತಿಲ್ಲ, ಬಡವರಿಗೆ ಆರೋಗ್ಯ ಸೇವೆಗಳು, ಶಿಕ್ಷಣಕ್ಕಾಗಿ ಇದನ್ನು ಬಳಸಲಾಗುತ್ತಿದೆ ಎಂದರು.







