ಮಂಗಳೂರಲ್ಲಿ ಅತ್ಯಾಧುನಿಕ ವೈರಾಣು ಪ್ರಯೋಗಾಲಯ ಸ್ಥಾಪನೆ: ಡಾ.ಸುಧಾಕರ್
ಚಾರ್ಮಾಡಿಯಲ್ಲಿ ಆರೋಗ್ಯ ಕೇಂದ್ರ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ, ಜೂ.30: ಮಂಗಳೂರಿನಲ್ಲಿ ಅತ್ಯಾಧುನಿಕ ವೈರಾಣು ಪ್ರಯೋಗಾಲಯವನ್ನು ಶೀಘ್ರವೇ ಸ್ಥಾಪನೆ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕೊರೋನ ಸೋಂಕು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಾ ಹೊರಟಿದೆ. ವೈರಾಣು ಪ್ರಯೋಗಾಲಯ ಸ್ಥಾಪಿಸಿದ್ದಲ್ಲಿ ವೈರಾಣುಗಳ ಸ್ವರೂಪ, ಸ್ವಭಾವದಲ್ಲಿನ ಬದಲಾವಣೆಗಳ ಬಗ್ಗೆ ಕೂಲಂಕಷವಾಗಿ ಸಂಶೋಧನೆ ನಡೆಸಲು ಸಾಧ್ಯವಾಗುತ್ತದೆ ಎಂದರು.
1.37 ಕೋಟಿ ರೂ. ವೆಚ್ಚದಲ್ಲಿ ಚಾರ್ಮಾಡಿಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರಕಾರ ಒತ್ತು ನೀಡಿದೆ ಎಂದು ಹೇಳಿದರು.
ಹೊಸ ಮಾದರಿಯ ಚಿಕಿತ್ಸಾ ಕೇಂದ್ರಗಳನ್ನು ಕೂಡ ಆರಂಭಿಸಲಾಗುತ್ತಿದೆ. ಈಗಾಗಲೇ ಎಂಟು ಕೋಟಿ ರೂ. ವೆಚ್ಚದಲ್ಲಿ ಪಡಂಗಡಿ ಗ್ರಾಮದಲ್ಲಿ ನೂತನ ಮಾದರಿಯ ಚಿಕಿತ್ಸಾ ಕೇಂದ್ರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ಸೇರಿದಂತೆ ಆರೋಗ್ಯ ವ್ಯವಸ್ಥೆ ನೀಡಲು ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದು ಸರಕಾರದ ಮೂಲ ಉದ್ದೇಶ ಎಂದರು.
* ವೈದ್ಯರ ನೇಮಕಾತಿ: ರಾಜ್ಯದಲ್ಲಿ ಈ ಮೊದಲು ವೈದ್ಯರ ಕೊರತೆ ಕಂಡು ಬಂದಿತ್ತು. ಸದ್ಯ ವೈದ್ಯರು, ತಜ್ಞ ವೈದ್ಯರು, ವೈದ್ಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಶೇ.80ರಷ್ಟು ವೈದ್ಯರ ನೇಮಕಾತಿ ನಡೆದಿದೆ. ಬಹುತೇಕ ವೈದ್ಯರು ಹುದ್ದೆ ಅಲಂಕರಿಸಿದ್ದಾರೆ. ಜೊತೆಗೆ ಒಂದು ವರ್ಷದ ಮಟ್ಟಿಗೆ ಗುತ್ತಿಗೆ ಆಧಾರದಲ್ಲೂ ವೈದ್ಯ ಸಿಬ್ಬಂದಿ ನೇಮಕಗೊಳಿಸಲಾಗಿದೆ ಎಂದು ಹೇಳಿದರು.
* 3ನೇ ಅಲೆ ಎದುರಿಸಲು ಸಿದ್ಧತೆ: ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯ ಸರಕಾರ ಅದನ್ನು ಎದುರಿಸಲು ಸರ್ವ ಸಿದ್ಧತೆ ನಡೆಸಿದೆ. ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಲಾಗಿದೆ. ಲಸಿಕೀಕರಣ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಲಸಿಕೆ ಹಾಕುವಿಕೆ ಪೂರ್ಣಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ 32 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆಸ್ಪತ್ರೆಗಳ ಕಂಪೌಂಡ್ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜಾ, ದ.ಕ. ಜಿಪಂ ಸಿಇಒ ಡಾ.ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್‌ಕುಮಾರ್, ಚಾರ್ಮಾಡಿ ಗ್ರಾಪಂ ಅಧ್ಯಕ್ಷ ಕೆ.ಇ. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.










