ಗಾಝೀಪುರ್ ನಲ್ಲಿ ರೈತ ಹೋರಾಟಗಾರರು-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Photo: NDTV
ಹೊಸದಿಲ್ಲಿ: ಉತ್ತರ ಪ್ರದೇಶ-ದಿಲ್ಲಿ ಗಡಿ ಭಾಗವಾಗಿರುವ ಗಝೀಪುರ್ ನಲ್ಲಿ ಕೃಷಿ ಕಾಯಿದೆ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ಘರ್ಷಣೆಗಳು ನಡೆದ ಕುರಿತು ವರದಿಯಾಗಿದೆ. ಕಳೆದ ನವೆಂಬರ್ ತಿಂಗಳಿನಿಂದ ಹೆದ್ದಾರಿಗೆ ಅಡ್ಡಿಯುಂಟು ಮಾಡಿರುವ ರೈತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಂತರ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಯ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದಾರೆ.
ಬುಲಂದ್ಶಹರ್ ಗೆ ತೆರಳುತ್ತಿದ್ದ ಪಕ್ಷದ ನಾಯಕ ಅಮಿತ್ ಪ್ರಧಾನ್ ಅವರನ್ನು ಭೇಟಿಯಾಗಲೆಂದು ಬಿಜೆಪಿ ಕಾರ್ಯಕರ್ತರು ಪಕ್ಷ ಧ್ವಜಗಳೊಂದಿಗೆ ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ರೈತರು ಆಕ್ಷೇಪಿಸಿದ್ದರಲ್ಲದೆ ಬಿಜೆಪಿಗರಿಗೆ ಕಪ್ಪು ಬಾವುಟ ತೋರಿಸಿದ್ದರಿಂದ ಎರಡು ಕಡೆಗಳ ನಡುವೆಯೂ ವ್ಯಾಗ್ಯುದ್ಧ ವಿಕೋಪಕ್ಕೆ ತಿರುಗಿದ್ದ ಸಂದರ್ಭ ಕಲ್ಲು ತೂರಾಟವೂ ನಡೆದು ಬಿಜೆಪಿ ನಾಯಕರೊಬ್ಬರ ಕಾರಿನ ಮೇಲೂ ದಾಳಿ ನಡೆಯಿತು ಎಂದು ndtv.com ವರದಿ ಮಾಡಿದೆ.
ರೈತ ಹೋರಾಟಗಾರರಿಗೆ ಕೆಟ್ಟ ಹೆಸರು ತರುವ ಸರಕಾರದ ಸಂಚಿನ ಭಾಗವಾಗಿ ಇಂದಿನ ಘಟನೆ ನಡೆದಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ.
ಬಿಜೆಪಿಗರು ರೈತರ ಜತೆಗೆ ತಪ್ಪಾಗಿ ವರ್ತಿಸಿದ್ದಾರೆ ಹಾಗೂ ತಮ್ಮ ವಾಹನವನ್ನು ತಾವೇ ಹಾನಿಗೊಳಿಸಿ ರೈತರಿಗೆ ದೂರಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ವಕ್ತಾರ ಜಗ್ತಾರ್ ಸಿಂಗ್ ಬಜ್ವಾ ಆರೋಪಿಸಿದ್ದಾರೆ.





