ಜುಲೈ 1ರಿಂದ ಆನ್‌ಲೈನ್ ತರಗತಿ ಆರಂಭ
ಮಂಗಳೂರು, ಜೂ.30: ಕೊರೋನದಿಂದಾಗಿ ಭೌತಿಕ ತರಗತಿಗಳ ಬದಲಾಗಿ ಆನ್‌ಲೈನ್ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಜುಲೈ 1ರಿಂದ ಹೊಸ ಶೈಕ್ಷಣಿಕ ವರ್ಷದ ಆನ್‌ಲೈನ್ ತರಗತಿಗಳು ಆರಂಭವಾಗಲಿವೆ.
ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ. ಶಾಲೆಗಳಿಗೆ ಪ್ರತಿದಿನವೂ ಶಿಕ್ಷಕರು ಆಗಮಿಸಲಿದ್ದಾರೆ. ಆನ್‌ಲೈನ್ ತರಗತಿಗಳು ನಿರಂತರವಾಗಿ ನಡೆಯಲಿವೆ. ಚಂದನ ವಾಹಿನಿ, ರೇಡಿಯೊ, ಅಂತರ್ಜಾಲದ ಮೂಲಕ ತರಗತಿ ನೀಡಲು ತಯಾರಿ ನಡೆಸಲಾಗಿದೆ.
ಕಳೆದ ವರ್ಷದಂತೆ ಈ ಬಾರಿಯೂ ಪಠ್ಯಪುಸ್ತಕ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ‘ಬುಕ್ ಬ್ಯಾಂಕ್’ ರಚನೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಅದರಂತೆ ಹಳೆಯ ಪುಸ್ತಕಗಳನ್ನು ಆಯಾ ಶಾಲೆಗಳೇ ಸಂಗ್ರಹಿಸಿವೆ. ಸದ್ಯಕ್ಕೆ ಇದೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣದ ಜೊತೆಗೆ ಅಗತ್ಯವುಳ್ಳ ನೋಟ್ಸ್‌ಗಳನ್ನು ಕೂಡ ತಲುಪಿಸಲಾಗುತ್ತದೆ ಎಂದು ದ.ಕ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಮಲ್ಲೇಸ್ವಾಮಿ ತಿಳಿಸಿದ್ದಾರೆ.





