ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಿ ರಾಜ್ಯದ ವಿವಿಧೆಡೆ ಡಿಎಚ್‍ಎಸ್ ಹೋರಾಟ

ಬೆಂಗಳೂರು, ಜೂ. 30: `ದಲಿತ ಮೇಲಿನ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸಿಎಂ ಅಧ್ಯಕ್ಷತೆಯಲ್ಲಿ ದೌರ್ಜನ್ಯ ತಡೆ ಸಮಿತಿ ಸಭೆ ನಡೆಸಬೇಕು. ದೌರ್ಜನ್ಯ ಎಸಗುವವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಬೇಕು' ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ರಾಜ್ಯದ ವಿವಿಧೆಡೆಗಳಲ್ಲಿ ಧರಣಿ, ಸತ್ಯಾಗ್ರಹ ನಡೆಸುವ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಬುಧವಾರ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ನೇತೃತ್ವದಲ್ಲಿ ರಾಜ್ಯಾದ್ಯಂತ ಚಳವಳಿ ನಡೆಸಿದ ಸಮಿತಿ ಕಾರ್ಯಕರ್ತರು ಸರಕಾರದ ನೀತಿಗಳನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
''ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಎಸ್ಸಿಪಿ, ಟಿಎಸ್ಪಿ ಯೋಜನೆ ಪುನರ್ ಮೌಲೀಕರಿಸಿ ಅರ್ಹ ಬಡ ದಲಿತರಿಗೆ ಆರ್ಥಿಕ ನೆರವು ನೀಡಬೇಕು. ಕೋವಿಡ್ ಸೋಂಕಿನ ಭೀಕರ ಪರಿಸ್ಥಿತಿಯಲ್ಲಿಯೂ ದಲಿತ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು, ಅವುಗಳನ್ನು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ದಲಿತರ ಮೇಲೆ ಯಾವುದೇ ಎಗ್ಗಿಲ್ಲದೆ ಕೊಲೆ, ದೌರ್ಜನ್ಯ, ಜಾತಿಯ ಅವಮಾನಗಳು ನಡೆಯುತ್ತಿದ್ದರೂ ಆಡಳಿತಾರೂಢ ಬಿಜೆಪಿ ಸರಕಾರ ಮೌನಕ್ಕೆ ಶರಣಾಗಿರುವುದು ಅಮಾನವೀಯ. ಸಂತ್ರಸ್ತರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಸ್ಥಳೀಯ ರಾಜಕೀಯ ಹಿತಾಸಕ್ತಿಗಳಿಗಾಗಿ ದೌರ್ಜನ್ಯ ನಡೆಸಿದ ಮೇಲ್ಜಾತಿಯವರಿಗೆ ಬೆಂಬಲ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಮಿತಿ ಹೋರಾಟ ತೀವ್ರಗೊಳಿಸಲಿದೆ' ಎಂದು ಗೋಪಾಲಕೃಷ್ಣ ಹರಳಹಳ್ಳಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.









