ಉಡುಪಿ: ಟಿಕೆಟ್ ದರ ಶೇ.25 ಏರಿಕೆಯೊಂದಿಗೆ ಜು.1ರಿಂದ ಖಾಸಗಿ ಬಸ್ ಓಡಾಟ
ಉಡುಪಿ, ಜೂ.30: ಉಡುಪಿ ಜಿಲ್ಲೆಯಲ್ಲಿ ಕೊರೋನ ಲಾಕ್‌ಡೌನ್ ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಜು.1ರಿಂದ ಪ್ರಯಾಣ ದರ ಶೇ25ರಷ್ಟು ಏರಿಕೆಯೊಂದಿಗೆ ಪುನಾ ರಂಭಗೊಳ್ಳಲಿದೆ.
ಜೂ.21ರಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದರೂ ತೆರಿಗೆ, ಡಿಸೇಲ್ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣ ನೀಡಿ ಖಾಸಗಿ ಬಸ್‌ಗಳು ಓಡಾಟ ನಡೆಸಿರಲಿಲ್ಲ. ನಂತರ ಶಾಸಕರು, ಜಿಲ್ಲಾಧಿಕಾರಿ ಅವರೊಂದಿಗೆ ಕೆನರಾ ಬಸ್ ಮಾಲಕರ ಸಂಘದವರು ನಡೆಸಿದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ದಂತೆ ಜು.1ರಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ.
‘ಉಡುಪಿ ಜಿಲ್ಲೆಯಲ್ಲಿ ಒಟ್ಟು 450 ಸರ್ವಿಸ್ ಹಾಗೂ ಸಿಟಿ ಬಸ್‌ಗಳಿದ್ದು, ಇವುಗಳಲ್ಲಿ ಶೇ.30ರಷ್ಟು ಬಸ್ ಮಾತ್ರ ನಾಳೆಯಿಂದ ರಸ್ತೆಗೆ ಇಳಿಯಲಿದೆ. ಅವು ಗಳಲ್ಲಿ ಕೆಲವು ಬಸ್‌ಗಳು ಮಂಗಳೂರಿಗೂ ಸಂಚರಿಸಲಿದೆ. ಉಳಿದ ಬಸ್‌ಗಳನ್ನು ಮುಂದೆ ಹಂತಹಂತವಾಗಿ ಓಡಿಸಲಾಗುವುದು. ಅದೇ ರೀತಿ ನಾಳೆಯಿಂದ ಟಿಕೆಟ್ ದರ ಕೂಡ ಹೆಚ್ಚಿಸಲಾಗುವುದು’ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
''ಮಣಿಪಾಲ- ಮಂಗಳೂರು 100ರೂ., ಉಡುಪಿ- ಮಂಗಳೂರು 95ರೂ., ಕಾಪು- ಮಂಗಳೂರು 70ರೂ., ಉಚ್ಚಿಲ -ಮಂಗಳೂರು 64ರೂ., ಪಡುಬಿದ್ರಿ- ಮಂಗಳೂರು 58ರೂ., ಮುಲ್ಕಿ- ಮಂಗಳೂರು 50ರೂ., ಕೊಲ್ನಾಡ್- ಮಂಗಳೂರು 50ರೂ., ಕೆಆರ್‌ಇಸಿ- ಮಂಗಳೂರು 40ರೂ., ಸುರತ್ಕಲ್- ಮಂಗಳೂರು 30ರೂ. ದರ ನಿಗದಿಪಡಿಸಲಾಗಿದೆ.
ಉಡುಪಿಯಿಂದ ಕಾಪು 30ರೂ., ಉಚ್ಚಿಲ 34ರೂ., ಪಡುಬಿದ್ರೆ 40ರೂ., ಮುಲ್ಕಿ 54ರೂ., ಕೋಲ್ನಾಡ್ 56ರೂ., ಕೆಆರ್‌ಇಸಿ 70ರೂ., ಸುರತ್ಕಲ್ ಗೆ 70ರೂ. ದರ ನಿಗದಿಪಡಿಸಲಾಗಿದೆ.







