ಹವಾಮಾನ ಒಪ್ಪಂದದ ಗುರಿ ತಲುಪಬೇಕಿದ್ದರೆ 1 ಬಿಲಿಯನ್ ಟನ್ ಇಂಗಾಲದ ಡೈಯಾಕ್ಸೈಡ್ ಹಿಂಗಿಸಬೇಕು: ಅಧ್ಯಯನ ವರದಿ
ಲಂಡನ್, ಜೂ.30: ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿ ತಲುಪಬೇಕಿದ್ದರೆ ಮತ್ತು ತಾಪಮಾನದ ದುರಂತವನ್ನು ತಪ್ಪಿಸಬೇಕಿದ್ದರೆ 2025ರೊಳಗೆ ವಾತಾವರಣದಿಂದ 1 ಬಿಲಿಯನ್ ಟನ್‌ಗಳಷ್ಟು ಇಂಗಾಲದ ಡೈಯಾಕ್ಸೈಡ್ ಅನ್ನು ತೊಡೆದುಹಾಕಬೇಕಿದೆ ಎಂದು ಬುಧವಾರ ಪ್ರಕಟವಾದ ವರದಿಯೊಂದು ಹೇಳಿದೆ.
2025ರೊಳಗೆ ಜಾಗತಿಕವಾಗಿ 1 ಬಿಲಿಯನ್ ಟನ್‌ಗಳಷ್ಟು ಇಂಗಾಲದ ಡೈಯಾಕ್ಸೈಡ್ , ಆ ಬಳಿಕ ಪ್ರತೀ ವರ್ಷ 1 ಬಿಲಿಯನ್ ಟನ್‌ನಷ್ಟನ್ನು ತೊಡೆದುಹಾಕದಿದ್ದರೆ ಪ್ಯಾರಿಸ್ ಒಪ್ಪಂದದಂತೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್‌ನೊಳಗೆ ಸೀಮಿತಗೊಳಿಸುವ ಗುರಿ ಸಾಧಿಸಲಾಗದು . ಈಗಿರುವ ಯೋಜನೆಗಳು 2025ರೊಳಗೆ ಕೇವಲ 150 ಮಿಲಿಯನ್ ಟನ್‌ನಷ್ಟು ಕಾರ್ಬನ್ ಡೈಯಾಕ್ಸೈಡ್ ಮಾತ್ರ ನಿವಾರಿಸಬಹುದು ಎಂದು ‘ನಕಾರಾತ್ಮಕ ಹೊರಸೂಸುವಿಕೆಗಾಗಿನ ಒಕ್ಕೂಟ’(ಸಿಎನ್‌ಇ) ಮತ್ತು ಮೆಕಿನ್ಸೆ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಕಾರಾತ್ಮಕ ಹೊರಸೂಸುವಿಕೆ ಯೋಜನೆಗಳಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಶೇಖರಿಡಿಸುವ ತಂತ್ರಜ್ಞಾನ, ಜೈವಿಕ ಇಂಧನ ಯೋಜನೆ, ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್ ಅನ್ನು ಹೀರಿಕೊಂಡು ಶೇಖರಿಸಿಡುವ , ಅರಣ್ಯೀಕರಣದಂತಹ ಪ್ರಾಕೃತಿಕ ಪರಿಹಾರ ಸೇರಿದೆ. ಇಂಗಾಲದ ಡೈಯಾಕ್ಸೈಡ್ ತೊಡೆದುಹಾಕಲು ಈಗ ಅನುಸರಿಸುತ್ತಿರುವ ತಂತ್ರಜ್ಞಾನ ದುಬಾರಿಯಾಗಿದ್ದು ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ ದರ ಕಡಿಮೆಗೊಳಿಸಬಹುದಾಗಿದೆ.
2050ರ ವೇಳೆಗೆ ಒಂದು ಟನ್ ಇಂಗಾಲದ ಡಯಾಕ್ಸೈಡ್ ತೊಡೆದುಹಾಕುವ ಸರಾಸರಿ ವೆಚ್ಚ 41ರಿಂದ 138 ಡಾಲರ್‌ನಷ್ಟಾಗಬಹುದು ಎಂದು ವರದಿ ಹೇಳಿದೆ. ಪ್ರತೀ ಟನ್‌ನಷ್ಟು ಇಂಗಾಲದ ಡೈಯಾಕ್ಸೈಡ್ ತೊಡೆದುಹಾಕಿದರೆ ಇಂತಿಷ್ಟು ತೆರಿಗೆ ವಿನಾಯಿತಿ ಎಂದು ಘೋಷಿಸುವ ಮೂಲಕ ದೇಶಗಳು ಇಂಗಾಲದ ಡೈಯಾಕ್ಸೈಡ್ ಕಡಿಮೆಗೊಳಿಸುವ ಪ್ರಕ್ರಿಯೆಗೆ ನೆರವಾಗಬಹುದಾಗಿದೆ ಎಂದು ಸಿಎನ್‌ಇ ಸಹಸಂಸ್ಥೆ ಡ್ರಾಕ್ಸ್‌ನ ಸಿಇಒ ವಿಲ್ ಗಾರ್ಡಿನರ್ ಹೇಳಿದ್ದಾರೆ.