ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಅಂಜುಮನ್ ಸಂಸ್ಥೆಯ ಉದ್ದೇಶ: ಮುಝಮ್ಮಿಲ್ ಕಾಝಿಯಾ

ಭಟ್ಕಳ: ಆರ್ಥಿಕ ದುಸ್ಥಿತಿಯಿಂದಾಗಿ ಸಮಾಜದ ಯಾವ ಮಗುವು ಕೂಡ ಶಿಕ್ಷಣದಿಂದ ವಂಚಿತರಾಗಕೂಡದು ಎಂಬುದೇ ಆಂಜುಮನ್ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದ್ದು, ಸಮಾಜದ ಕಟ್ಟಕಡೆಯ ಮಗು ತನ್ನ ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಸಂಸ್ಥೆ ಯೋಜನೆ ರೂಪಿಸಿದೆ ಎಂದು ಉ.ಕ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಝಿಯಾ ಹೇಳಿದರು.
ಅವರು ಬುಧವಾರ ಅಂಜುಮನಾಬಾದ್ ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಪೆಂಡಮಿಕ್ ಸ್ಥಿತಿ ಯಲ್ಲಿ ಶಿಕ್ಷಣಕ್ಕಾಗಿ ಅಂಜುಮನ್ ಸಂಸ್ಥೆ ಹಾಕಿಕೊಂಡಿರುವ ಯೋಜನೆಗಳನ್ನು ತಿಳಿಸಿದರು.
ಸರ್ಕಾರದ ನಿಯಮದಂತೆ ನಾವು ಕಳೆದ ವರ್ಷದ ಶಾಲಾ ಶುಲ್ಕದಲ್ಲಿ ಕಡಿತಗೊಳಿಸಿದ್ದೇವೆ. ತಾಲೂಕಿನಲ್ಲಿ ಅತಿಕಡಿಮೆ ಶಾಲಾ ಶುಲ್ಕವನ್ನು ಅಂಜುಮನ್ ಸಂಸ್ಥೆ ನಿಗದಿಗೊಳಿಸಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಬಡಕುಟುಂಬದ ವಿದ್ಯಾರ್ಥಿಗಳೂ ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವಂತಾಗಲು ಅವರಿಗಾಗಿ ವಿಶೇಷ ಯೋಜನೆಯನ್ನೂ ರೂಪಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿ ವಿಭಾಗಕ್ಕೂ ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗಾಗಿ ಶೇ.50ರಷ್ಟು ಶುಲ್ಕವನ್ನು ಕಡಿತಗೊಳಿಸಿದ್ದೇವೆ. ಕಂಪ್ಯುಟರ್ ಸೈನ್ಸ್ ನಲ್ಲಿ ದಾಖಲೆಯನ್ನು ಬಯಸಿ ಹಲವು ವಿದ್ಯಾರ್ಥಿಗಳು ಈಗಾಗಲೆ ತಮ್ಮ ಹೆಸರನ್ನು ನೋಂದಾಣಿ ಮಾಡಿಕೊಂಡಿದ್ದಾರೆ. ಪಾಲಕರು ಹಾಗೂ ವಿದ್ಯಾರ್ಥಿಗಳು ಕೂಡಲೆ ಕಚೇರಿ ಅವಧಿಯಲ್ಲಿ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಅಂಜುಮನ್ ಸಂಸ್ಥೆ ತನ್ನ ಹಿರಿಯರ ಕನಸುಗಳನ್ನು ನನಸು ಮಾಡಲು ಯಾವತ್ತೂ ಸನ್ನದ್ದವಾಗಿದೆ. ಅವರ ತ್ಯಾಗದ ಫಲವೆಂಬಂತೆ ಇಂದು ಸಂಸ್ಥೆಯ ಹೆಮ್ಮರವಾಗಿ ಬೆಳೆದು ನಿಂತಿದ್ದು ಕೇವಲ ಸೇವೆಯೊಂದೇ ಇದರ ಗುರಿಯಾಗಿದೆ ಎಂದರು.
ಸಂಸ್ಥೆಯ ಹೆಚ್ಚುವರಿ ಉಪಾಧ್ಯಕ್ಷ ಸಾದಿಕ್ ಪಿಲ್ಲೂರ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಶಾಂಬದ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸೈಯ್ಯದ್ ಹಾಶಿಮ್ ಎಸ್.ಜೆ. ಆಸಿಫ್ ದಾಮೂದಿ, ಮುಹಮ್ಮದ್ ಸಾದುಲ್ಲಾ ರುಕ್ನುದ್ದೀನ್ ಮುಂತಾದವರು ಉಪಸ್ಥಿತರಿ ದ್ದರು.







