‘ಖೇಲ್ ರತ್ನ ’ಕ್ಕೆ ಜಾವೆಲಿನ್ ಎಸೆತಗಾರ ನೀರಜ ಚೋಪ್ರಾ ಹೆಸರು ನಾಮಕರಣ

ಹೊಸದಿಲ್ಲಿ,ಜೂ.30: ಜಾವೆಲಿನ್ ಎಸೆತಗಾರ ನೀರಜ ಚೋಪ್ರಾ (23) ಅವರ ಹೆಸರನ್ನು ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನಾಮಕರಣ ಮಾಡಲಾಗಿದೆ. ಒಡಿಶಾ ಸರಕಾರವು ಈಗಾಗಲೇ ಈ ಉನ್ನತ ಪ್ರಶಸ್ತಿಗೆ ಓಟಗಾರ್ತಿ ದ್ಯುತೀ ಚಂದ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಚೋಪ್ರಾ 2018ರಿಂದ ನಾಲ್ಕನೇ ಬಾರಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.
ಈ ವರ್ಷದ ಖೇಲ್ ರತ್ನ ಪ್ರಶಸ್ತಿಗೆ ಚೋಪ್ರಾ ಅವರ ಹೆಸರನ್ನು ಪ್ರಶಸ್ತಿ ಸಮಿತಿಯು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಸ್ವರ್ಣಪದಕವನ್ನು ಗೆದ್ದ ಬಳಿಕ 2018ರಲ್ಲಿ ಚೋಪ್ರಾಗೆ ಅರ್ಜುನ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು. ಆ ವರ್ಷ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೂ ಶಿಫಾರಸು ಮಾಡಲಾಗಿತ್ತು. 2018ರ ಏಶ್ಯನ್ ಗೇಮ್ಸನಲ್ಲಿ ಚಿನ್ನವನ್ನು ಗೆದ್ದ ಬಳಿಕ 2019ರಲ್ಲಿ ಅವರನ್ನು ಮತ್ತೆ ಈ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಕಳೆದ ವರ್ಷವೂ ಅವರನ್ನು ಈ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿತ್ತು.
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಿರುವ ಚೋಪ್ರಾ ಈಗ ಯುರೋಪಿನಲ್ಲಿ ಅದಕ್ಕಾಗಿ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಈ ವರ್ಷದ ಜೂನ್ 10ರಿಂದ ಪೋರ್ಚುಗಲ್,ಸ್ವೀಡನ್ ಮತ್ತು ಫಿನ್ಲಂಡ್‌ಗಳಲ್ಲಿ ಮೂರು ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದರು. ಮಂಗಳವಾರ ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಬೇಕಿತ್ತಾದರೂ ಬಹಳಷ್ಟು ಪ್ರವಾಸಗಳಿಂದಾಗಿ ವಿಶ್ರಾಂತಿ ಅಗತ್ಯವಾಗಿದ್ದರಿಂದ ಹಿಂದೆ ಸರಿದಿದ್ದರು.