ಕೋವಿಡ್ ಸೋಂಕಿಗೆ ಒಳಗಾಗಿದ್ದರೆ ಸಿಎ ಪರೀಕ್ಷೆಗೆ ಹಾಜರಾತಿಯಿಂದ ವಿನಾಯಿತಿ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜೂ.30: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನೀಡಿದ ಯೋಜನೆ ಅಸಮಂಜಸವಾಗಿದೆ ಎಂದು ಬುಧವಾರ ಗಮನಿಸಿರುವ ಸುಪ್ರೀಂ ಕೋರ್ಟ್, ಸಿಎ ಪರೀಕ್ಷೆಯ ಅಭ್ಯರ್ಥಿಗೆ ಅವರು ಅಥವಾ ಅವರ ಕುಟುಂಬದ ಸದಸ್ಯರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೆ ಪರೀಕ್ಷೆಗೆ ಹಾಜರಾಗದಿರುವ ಅವಕಾಶ ನೀಡಿದೆ.
ಅಭ್ಯರ್ಥಿ ಇರುವ ನಗರದಲ್ಲೇ ಪರೀಕ್ಷೆ ನಡೆದರೆ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗದೆ ಇರುವಂತಿಲ್ಲ ಎಂದು ಐಸಿಎಐ ತನ್ನ ಯೋಜನೆಯಲ್ಲಿ ತಿಳಿಸಿತ್ತು. ಪರೀಕ್ಷೆಗೆ ಹಾಜರಾಗದಿರುವ ಬಗೆಗಿನ ಮನವಿಯೊಂದಿಗೆ ಅಭ್ಯರ್ಥಿಗೆ ಅಥವಾ ಅಭ್ಯರ್ಥಿಯ ಕುಟುಂಬದ ಸದಸ್ಯರಿಗೆ ನೋಂದಾಯಿತ ವೈದ್ಯರು ನೀಡಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿದರೆ, ಅಭ್ಯರ್ಥಿ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಹಾಜರುಪಡಿಸುವ ಅಗತ್ಯತೆ ಇರುವುದಿಲ್ಲ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
‘ಅಭ್ಯರ್ಥಿ ಅಥವಾ ಅವರ ಕುಟುಂಬದ ಸದಸ್ಯರು ಕೋವಿಡ್ ಸೋಂಕಿಗೆ ಒಳಗಾಗಿದ್ದರೆ, ನೋಂದಾಯಿತ ವೈದ್ಯರಿಂದ ಪ್ರಮಾಣ ಪ್ರತ ಪಡೆದುಕೊಂಡರೆ, ಅವರು ಪರೀಕ್ಷೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರು ಪರೀಕ್ಷೆಗೆ ಹಾಜರಾಗದೇ ಇರಬಹುದು. ಆದರೆ, ಇದನ್ನು ಒಂದು ಪ್ರಯತ್ನ ಎಂದು ಪರಿಗಣಿಸುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಹೊಸ ಹಾಗೂ ಹಳೆಯ ಪಠ್ಯಕ್ರಮದ ಅಡಿಯಲ್ಲಿ ಮುಂದಿನ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು’’ ಎಂದು ನ್ಯಾಯಪೀಠ ಹೇಳಿದೆ.







