ಮನೆ ಮುಂದಿನ ನೀರಿನ ತೊಟ್ಟಿಯಲ್ಲಿ ನವ ವಿವಾಹಿತೆಯ ಶವ ಪತ್ತೆ: ಕೊಲೆ ಶಂಕೆ

ಚಿಕ್ಕಮಗಳೂರು, ಜೂ.29: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿಯ ಮೃತದೇಹ ಮನೆ ಮುಂದಿನ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ನಗರದ ಗೌರಿಕಾಲುವೆ ಬಡಾವಣೆಯಲ್ಲಿ ವರದಿಯಾಗಿದ್ದು, ಯುವತಿಯ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದಾರೆ.
ನಗರದ ಗೌರಿ ಕಾಲುವೆಯ ಸಿಮ್ರಾನ್(22) ಮತ್ತು ಪೆನ್ಷನ್ ಮೊಹಲ್ಲಾ ಬಡಾವಣೆಯ ಫೈರೋಝ್ ಮೂರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಬುಧವಾರ ಫೈರೋಝ್ ಮನೆ ಮುಂದಿರುವ ನೀರಿನ ತೊಟ್ಟಿಯಲ್ಲಿ ಸಿಮ್ರಾನ್ ಮೃತದೇಹ ಪತ್ತೆಯಾಗಿದ್ದು, ಯುವತಿ ಕುಟುಂಬದವರು ಇದು ಕೊಲೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಯುವತಿಯ ಗಂಡ ಫೈರೋಝ್ ಹಾಗೂ ಆತನ ತಂದೆ, ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
Next Story





