ಬ್ರೆಝಿಲ್ ಕೊವ್ಯಾಕ್ಸಿನ್ ಒಪ್ಪಂದದ ವಿವಾದದಲ್ಲಿ ನಮ್ಮದೇನೂ ತಪ್ಪಿಲ್ಲ: ಭಾರತ್ ಬಯೊಟೆಕ್ ಹೇಳಿಕೆ
ಹೊಸದಿಲ್ಲಿ, ಜೂ.30: ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಬ್ರೆಝಿಲ್ ಮಾಡಿಕೊಂಡಿದ್ದ ಒಪ್ಪಂದವನ್ನು ಅವ್ಯವಹಾರದ ಆರೋಪದಲ್ಲಿ ಅಮಾನತಿನಲ್ಲಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೊವ್ಯಾಕ್ಸಿನ್ ಉತ್ಪಾದನಾ ಸಂಸ್ಥೆ ಭಾರತ್ ಬಯೊಟೆಕ್, ಇದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದಿದೆ.
ಕೊವ್ಯಾಕ್ಸಿನ್ ಖರೀದಿ ಸಂಬಂಧ ಬ್ರೆಝಿಲ್ ಆರೋಗ್ಯ ಇಲಾಖೆಯೊಂದಿಗಿನ ನಿರ್ದಿಷ್ಟ ವ್ಯವಹಾರದಲ್ಲಿ ಗುತ್ತಿಗೆ ಮತ್ತು ಕಾನೂನುಬದ್ಧ ಅನುಮೋದನೆ ಪಡೆಯಲು 2020ರ ನವೆಂಬರ್‌ನಿಂದ 2021ರ ಜೂನ್ 29ರವರೆಗೆ ಹಂತ ಹಂತದ ಕ್ರಮ ಅನುಸರಿಸಲಾಗಿದೆ. ಜೂನ್ 29ರವರೆಗೆ, ಭಾರತ್ ಬಯೊಟೆಕ್‌ಗೆ ಬ್ರೆಝಿಲ್‌ನಿಂದ ಯಾವುದೇ ಮುಂಗಡ ಹಣ ಬಂದಿಲ್ಲ, ಅಥವಾ ಯಾವುದೇ ಲಸಿಕೆಯನ್ನು ಆ ದೇಶಕ್ಕೆ ರವಾನಿಸಿಲ್ಲ. ಇದೇ ರೀತಿಯ ಕ್ರಮವನ್ನು ವಿಶ್ವದ ಇತರ ದೇಶಗಳೊಂದಿಗೆ ನಡೆಸಿದ ವ್ಯವಹಾರದಲ್ಲೂ ನಡೆಸಿದ್ದು, ಆ ದೇಶಗಳಿಗೆ ಯಾವುದೇ ಸಮಸ್ಯೆಯಿಲ್ಲದೆ ಕೊವ್ಯಾಕ್ಸಿನ್ ಲಸಿಕೆ ಪೂರೈಸಲಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೊಟೆಕ್ ಹೇಳಿದೆ.
ಲಸಿಕೆಯ ದರಕ್ಕೆ ಸಂಬಂಧಿಸಿ ಯಾವುದೇ ಗೊಂದಲಕ್ಕೆ ಕಾರಣವಿಲ್ಲ. ಯಾಕೆಂದರೆ ಭಾರತ ಹೊರತುಪಡಿಸಿ ಇತರ ದೇಶಗಳಿಗೆ ಒಂದು ಡೋಸ್ ಲಸಿಕೆಗೆ 15ರಿಂದ 20 ಡಾಲರ್ ಬೆಲೆ ನಿಗದಿಯಾಗಿದೆ. ಬ್ರೆಝಿಲ್‌ಗೆ ಡೋಸ್‌ಗೆ 15 ಡಾಲರ್ ನಿಗದಿಗೊಳಿಸಲಾಗಿದೆ. ಇದೇ ದರದಲ್ಲಿ ಪೂರೈಸಲು ಹಲವು ದೇಶಗಳು ಭಾರತ್ ಬಯೊಟೆಕ್‌ಗೆ ಮುಂಗಡ ಹಣ ಪಾವತಿಸಿವೆ ಎಂದು ಹೇಳಿಕೆ ತಿಳಿಸಿದೆ. ಸಂಸ್ಥೆಯು ಸುಮಾರು 20 ಉತ್ಪನ್ನಗಳನ್ನು 123ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿದ್ದು ವಿಶ್ವದ ವಿವಿಧ ದೇಶಗಳಿಗೆ 4 ಬಿಲಿಯನ್ ಡೋಸ್‌ಗೂ ಅಧಿಕ ಲಸಿಕೆ ಪೂರೈಸಿರುವುದು ಸಂಸ್ಥೆಯ ಪ್ರಾಮಾಣಿಕ ವ್ಯವಹಾರಕ್ಕೆ ದೊರೆತ ನಿದರ್ಶನವಾಗಿದೆ ಎಂದು ಹೇಳಿದೆ.







