ಪಾಕ್ ಹಿಂದೂ ವಲಸಿಗರಿಗೆ ಲಸಿಕೆ ನೀಡಿಕೆ ಕಾರ್ಯ ಆರಂಭಗೊಂಡಿದೆ: ಹೈಕೋರ್ಟ್ ಗೆ ತಿಳಿಸಿದ ರಾಜಸ್ಥಾನ ಸರಕಾರ

ಹೊಸದಿಲ್ಲಿ: ರಾಜಸ್ಥಾನದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದು ವಲಸಿಗರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ರಾಜಸ್ಥಾನ ಸರಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ. ತಮ್ಮಲ್ಲಿ ಆಧಾರ್ ಕಾರ್ಡ್ ಇಲ್ಲವೆಂದು ಲಸಿಕಾ ಕೇಂದ್ರಗಳಿಂದ ತಮ್ಮನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಹಿಂದು ವಲಸಿಗರು ಈ ಹಿಂದೆ ಪ್ರಧಾನಿಗೆ ಪತ್ರ ಬರೆದು ದೂರಿದ್ದರು.
ವಲಸಿಗರಿಗೆ ಲಸಿಕೆ ನೀಡುವ ಯೋಜನೆ ರೂಪಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದ ನಂತರ ಮೇಲಿನ ಮಾಹಿತಿ ನೀಡಿ ಅಲ್ಲಿನ ಅಶೋಕ್ ಗೆಹ್ಲೋಟ್ ಸರಕಾರ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಹಾಗೂ ನ್ಯಾಯಮೂರ್ತಿ ವಿನೀತ್ ಕುಮಾರ್ ಮಾಥುರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದೆ.
ಲಸಿಕೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಈ ಹಿಂದೆ ತಿಳಿಸಿದ್ದ ಕೇಂದ್ರ ಗೃಹ ಸಚಿವಾಲಯ ನಂತರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಲಸಿಕೆ ನೀಡುವಾಗ ಪರಿಶೀಲನೆಗೆ ಆಧಾರ್ ಕಾರ್ಡ್ ಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿತ್ತು. ಆದರೂ ಆಧಾರ್ ಕಾರ್ಡ್ ಇಲ್ಲವೆಂದು ಹಲವು ಪಾಕ್ ಹಿಂದು ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ ಎಂಬ ವರದಿಗಳ ನಂತರ ಇತರ ನಾಗರಿಕರಂತೆಯೇ ವಲಸಿಗರನ್ನು ಏಕೆ ಪರಿಗಣಿಸಲಾಗಿಲ್ಲ ಎಂದು ಹೈಕೋರ್ಟ್ ಪೀಠ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಲಸಿಕೆ ಪಡೆದ ವಲಸಿಗರ ವಿವರ ಹೊಂದಿದ ಇನ್ನೊಂದು ಅಫಿಡವಿಟ್ ಸಲ್ಲಿಸಲಾಗುವುದು ಎಂದೂ ರಾಜ್ಯ ಸರಕಾರ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದೆ.
ಪಾಕಿಸ್ತಾನಿ ವಲಸಿಗರ ಸಂಖ್ಯೆ ರಾಜಸ್ಥಾನದಲ್ಲಿ ಗರಿಷ್ಠವಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.







