ಕೊರೋನ ಹರಡುವಿಕೆ ತಡೆಗೆ ಗಿಲ್ಬರ್ಟ್ ಡಿಸೋಜಾ ತಂಡದ ಸರಳ ಸೂತ್ರ

ಮಂಗಳೂರು, ಜು. 1: ಕೊರೋನ ಹರಡುವಿಕೆಯನ್ನು ತಡೆಯುವಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದ್ದು, ಅದನ್ನು ಸರಳ ಸೂತ್ರ ಅನುಸರಿಸುವ ಮೂಲಕ ಪಾಲಿಸಬಹುದು ಎಂಬ ಸರಳ ಸೂತ್ರವೊಂದನ್ನು ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ನೇತೃತ್ವದ ತಂಡ ಪ್ರಸ್ತಾಪಿಸಿದೆ.
ಕಳೆದ ವರ್ಷ ಹಂಪನಕಟ್ಟೆ, ಕಂಕನಾಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದ ಗಿಲ್ಬರ್ಟ್ ಡಿಸೋಜಾ ಹಾಗೂ ಅವರ ತಂಡದ ಇಬ್ಬರು ಸದಸ್ಯರು ಇಂದು ಪ್ರೆಸ್‌ಕ್ಲಬ್‌ನಲ್ಲಿ ತಮ್ಮ ಸರಳ ಸೂತ್ರದ ಬಗ್ಗೆ ಮಾಹಿತಿ ನೀಡಿದರು.
ಪ್ರತಿಯೊಬ್ಬರು ಮೊಬೈಲ್ ಸಂಖ್ಯೆಯ ಕೊನೆ ಅಂಕಿಯ ಅನುಸಾರ ನಿಗದಿತ ಅವಧಿಯಲ್ಲಿ ಮಾತ್ರವೇ ಖರೀದಿ ಕಾರ್ಯ ನಡೆಸಿದರೆ ಬಹುತೇಕವಾಗಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗಿಲ್ಬರ್ಟ್ ಡಿಸೋಜಾ ಹೇಳಿದರು.
ಬೆಳಗ್ಗೆ 8ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ಪ್ರತಿ ಒಂದು ಗಂಟೆಗೆ ಸೀಮಿತವಾಗಿ ತಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಅಂಕಿಯ ಕ್ರಮ ಸಂಖ್ಯೆಯ ಆಧಾರದಲ್ಲಿ (1,2,3....) ಖರೀದಿಗೆ ಅವಾಕಾಶವನ್ನು ಒದಗಿಸಬೇಕು. ಆಗ ಅಂಗಡಿ ಸೇರಿದಂತೆ ಖರೀದಿ ಸ್ಥಳದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಬಹುದು. ಜನರು ಪ್ರಥಮವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಬಗ್ಗೆ ತಮಗೆ ತಾವು ಮನವರಿಕೆ ಮಾಡಿಕೊಂಡು ಪಾಲಿಸಿದಲ್ಲಿ ಕೊರೋನ ಸೋಂಕು ಹರಡುವಿಕೆಯನ್ನು ಕನಿಷ್ಠ ಒಂದು ತಿಂಗಳ ಅವಧಿಯಲ್ಲಿ ನಿಯಂತ್ರಿಸಲು ಸಾಧ್ಯ. ಜನ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ಕೆ ಮುಂದಾಗಬೇಕು. ಆಡಳಿತ ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದು ಅವರು ಹೇಳಿದರು.
ತಮ್ಮ ಈ ಸರಳ ಸೂತ್ರದ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನವನ್ನೂ ಸೆಳೆಯಲು ತಾವು ನಿರ್ಧರಿಸಿರುವುದಾಗಿ ಅವರು ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಲೋಶಿಯಸ್ ಅಲ್ಬುಕರ್ಕ್, ಇಲಿಯಾಸ್ ಸಾಂತಿಸ್ ಉಪಸ್ಥಿತರಿದ್ದರು.







