ಮಂಗಳೂರು; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪುತ್ರನ ಕೊಲೆಯತ್ನ ಪ್ರಕರಣ: ಗಾಯಾಳು ಮೃತ್ಯು

ಮಂಗಳೂರು, ಜು.1: ತಂದೆಯೇ ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣದ ಸಂತ್ರಸ್ತ ಗಾಯಾಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಸ್ವಾಮೀತ್ ಶೆಟ್ಟಿ (25) ಚಿಕಿತ್ಸೆ ಫಲಕಾರಿಯಾಗದೆ ಮೃತ ಯುವಕ.
ನಗರದ ಹೊರವಲಯದ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ಜೂ.21ರಂದು ರಾತ್ರಿ 11:30ಕ್ಕೆ ವಿಶ್ವನಾಥ ಶೆಟ್ಟಿ ದನ ಕಟ್ಟುವ ವಿಚಾರ ದಲ್ಲಿ ಕೋಪಗೊಂಡು ತನ್ನ ಮಗನ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ಶರೀರದ ಮೇಲೆ ಸುಟ್ಟಗಾಯಗಳಾಗಿದ್ದವು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀತ್ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





