ವಿದೇಶಗಳು ʼಉಕ್ಕಿನ ಮಹಾಗೋಡೆಯೊಂದಿಗೆ ಸೆಣಸಬೇಕಾದೀತುʼ: ಚೀನಾ ಅಧ್ಯಕ್ಷ ಜಿನ್ಪಿಂಗ್ ಎಚ್ಚರಿಕೆ
"ಚೀನಾ ಯಾರ ಬೆದರಿಕೆಗಳಿಗೂ ಜಗ್ಗುವುದಿಲ್ಲ"

ಬೀಜಿಂಗ್ :ಚೀನಾ ದೇಶದ ವೈರಿಗಳು ʼಉಕ್ಕಿನ ಮಹಾ ಗೋಡೆಯ ಜತೆಗೆ ಸೆಣಸಬೇಕಾದೀತುʼ ಎಂದು ಗುರುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎಚ್ಚರಿಕೆ ನೀಡಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾದ 100 ವರ್ಷಾಚರಣೆಯ ಸಂದರ್ಭ ಟಿಯನನ್ಮೆನ್ ಸ್ಕ್ವೇರ್‍ನಲ್ಲಿ ಇಂದು ಸುಮಾರು ಒಂದು ಗಂಟೆ ಅವಧಿಯ ಭಾಷಣವನ್ನು ಜಿನ್ಪಿಂಗ್ ನೀಡಿದರು."ಚೀನಾ ಯಾರ ಬೆದರಿಕೆಗಳಿಗೂ ಜಗ್ಗುವುದಿಲ್ಲಿ ಒಂದು ದೇಶವಾಗಿ ನಮಗೆ ಹೆಮ್ಮೆ ಹಾಗೂ ಆತ್ಮವಿಶ್ವಾಸವಿದೆ. ನಾವು ಯಾವುದೇ ಇತರ ದೇಶಕ್ಕೆ ಯಾವತ್ತೂ ಬೆದರಿಕೆ ಹಾಕಿಲ್ಲ ಹಾಗೂ ಹಾಗೆ ಮಾಡುವುದೂ ಇಲ್ಲ. ಅಂತೆಯೇ ನಮ್ಮನ್ನು ಬೆದರಿಸಲು ಯಾವುದೇ ವಿದೇಶಿ ಶಕ್ತಿಗಳಿಗೆ ನಾವು ಅನುಮತಿಸುವುದಿಲ್ಲ. ಹಾಗೆ ಮಾಡಲು ಯಾರಾದರೂ ಯತ್ನಿಸಿದಲ್ಲಿ ಅವರು 1.4 ಬಿಲಿಯ ಚೀನೀ ಜನರಿಂದ ಬಲಯುತವಾಗಿರುವ ಉಕ್ಕಿನ ಮಹಾಗೋಡೆಯ ವಿರುದ್ಧ ಸೆಣಸಬೇಕು" ಎಂದು ಅವರು ಭಾರೀ ಕರತಾಡನದ ನಡುವೆ ಹೇಳಿದರು.
ಚೀನಾದ ಮಿಲಿಟರಿಯನ್ನು ಇನ್ನಷ್ಟು ಬಲಪಡಿಸುವುದಾಗಿ ಹಾಗೂ ತೈವಾನ್ ಅನ್ನು ಚೀನಾದ ಜತೆ ವಿಲೀನಗೊಳಿಸಲು ಚೀನಾ ಬದ್ಧವಾಗಿದೆ ಎಂದು ಘೋಷಿಸಿದರು.
ಹಾಂಕಾಂಗ್ ಅನ್ನು ಉಲ್ಲೇಖಿಸಿದ ಜಿನ್ಪಿಂಗ್ ಚೀನಾದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗದಂತೆ ನೋಡಿಕೊಂಡು ಹಾಂಕಾಂಗ್‍ನಲ್ಲಿ ಸಾಮಾಜಿಕ ಸ್ಥಿರತೆಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಈಗಿನ ಹಾಗೂ ಮಾಜಿ ನಾಯಕರೂ ಉಪಸ್ಥಿತರಿದ್ದರು.





