‘ಸೈಬರ್ ಸೇಫ್ ಗರ್ಲ್-4’ ಪುಸ್ತಕ ಲೋಕಾರ್ಪಣೆ

ಮಂಗಳೂರು, ಜು.1: ಸೈಬರ್ ತಂತ್ರಜ್ಞ ಡಾ.ಅನಂತ ಪ್ರಭು ಜಿ. ರಚಿಸಿದ ‘ಸೈಬರ್ ಸೇಫ್ ಗರ್ಲ್ 4ನೇ ಆವೃತ್ತಿ’ ಪುಸ್ತಕವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವರ್ಚ್ಯೂಅಲ್ ಮೂಲಕ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಮಹಿಳೆಯರನ್ನು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ, ಹೆಚ್ಚಿನ ಸಮಯ ಆರ್ಥಿಕ ವಂಚನೆಗೂ ಗುರಿಯಾಗಿರಿಸಿಕೊಳ್ಳುತ್ತಿರುವುದು ತುಂಬ ಅಪಾಯಕಾರಿ. ಸೈಬರ್ ಅಪರಾಧದ ಬಗ್ಗೆ ಮಾಹಿತಿ ಇಲ್ಲದಿರುವಿಕೆ, ಜಾಗೃತಿ ಮೂಡಿಸದಿರುವುದು ಮಹಿಳೆಯರು ಸೈಬರ್ ದಾಳಿಗೆ ತುತ್ತಾಗಲು ಮೇಲಿಂದ ಮೇಲೆ ಕಾರಣವಾಗುತ್ತಿದೆ. ಸೈಬರ್ ಅಪರಾಧಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಕಿರುಕುಳ ನೀಡುವಂತಹ ಹೊಸ ಬಗೆಯ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ಅಪರಾಧದ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು ಎಂದರು.
ಸೈಬರ್ ಅಪರಾಧಿಗಳಿಗೆ ಮಹಿಳೆಯರು ಮತ್ತು ಮಕ್ಕಳೇ ಗುರಿಯಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿಗಳನ್ನು ರಚಿಸಿ, ಸೈಬರ್ ಅಪರಾಧಿಗಳು ವಂಚಿಸಲು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು. ಸೈಬರ್ ಅಪರಾಧಗಳನ್ನು ತೊಡೆದು ಹಾಕಲು ಸ್ತ್ರೀಯರಿಗೆ ವೇದಿಕೆ ನೀಡುವ ಅಗತ್ಯವಿದೆ. ಈ ಅವಕಾಶ ಕಲ್ಪಿಸಲು ‘ಸೈಬರ್ ಸೇಫ್ ಗರ್ಲ್-4’ ಪುಸ್ತಕ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಇದೊಂದು ಉತ್ತಮ ಪುಸ್ತಕ. ಸಚಿತ್ರ ಬರಹವು ಪ್ರಸ್ತುತ ಕಾಲಘಟ್ಟದ ಬಗ್ಗೆ ಸವಿವರವಾಗಿ ಪ್ರತಿಪಾದಿಸುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಅಪರಾಧವೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಪುಸ್ತಕದ ಬಗ್ಗೆ ವಿವರಿಸಿದರು.
ಸೈಬರ್ ತಂತ್ರಜ್ಞ ಡಾ.ಅನಂತ ಪ್ರಭು ಜಿ. ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಸದಾ ಪೂಜ್ಯನೀಯ ಸ್ಥಾನ ಪಡೆದಿದ್ದಾಳೆ. ಮಹಿಳೆಯನ್ನು ಗೌರವಿಸುವ ಜಾಗದಲ್ಲಿ ದೇವರು ನೆಲೆಸಿರುತ್ತಾನೆ ಎನ್ನುವ ಮಾತಿದೆ. ಆದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಮಹಿಳೆಯರ ವಿರುದ್ಧ ಸೈಬರ್ ಪ್ರಕರಣಗಳು ಹೆಚ್ಚಳ ಕಂಡು ಬರುತ್ತಿರುವುದು ದುರದೃಷ್ಟಕರ. ಸೈಬರ್ ಪ್ರಪಂಚದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಈ ಪುಸ್ತಕ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಸಹ ಲೇಖಕ, ಡಿವೈಎಸ್ಪಿ ಯಶವಂತಕುಮಾರ್ ಮಾತನಾಡಿ, ಸೈಬರ್ ಪ್ರಪಂಚದ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಾಯೋಗಿಕ ಸಲಹೆಗಳು, ಅಂತರ್ಜಾಲವನ್ನು ಜವಾಬ್ದಾರಿಯುತವಾಗಿ ಬ್ರೌಸ್ ಮಾಡುವ ಸಲಹೆಗಳು ಮತ್ತು ಸೈಬರ್ ಪರಿಭಾಷೆಗಳ ಪದಕೋಶವನ್ನು ಪುಸ್ತಕ ದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೈಬರ್ ತಂತ್ರಜ್ಞ ಡಾ.ಅನಂತ ಪ್ರಭು ಜಿ. ಸ್ವಾಗತಿಸಿದರು. ಸಹ-ಲೇಖಕ, ನ್ಯಾಯವಾದಿ ಪ್ರಶಾಂತ್ ಝಲ ವಂದಿಸಿದರು.
www.cybersafegirl.comಗೆ ಭೇಟಿ ನೀಡುವ ಮೂಲಕ ಉಚಿತವಾಗಿ ಪುಸ್ತಕವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.








