ನ್ಯಾಯಾಂಗವನ್ನು ನಿಯಂತ್ರಿಸಲಾಗದು ಎಂಬ ಸಿಜೆಐಯವರ ಹೇಳಿಕೆ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ: ಕಾಂಗ್ರೆಸ್

ಹೊಸದಿಲ್ಲಿ: "ನ್ಯಾಯಾಂಗವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಶಾಸಕಾಂಗ ಅಥವಾ ಕಾರ್ಯಾಂಗದಿಂದ ನಿಯಂತ್ರಿಸಲಾಗುವುದಿಲ್ಲ. ಇಲ್ಲದಿದ್ದರೆ ಕಾನೂನಿನ ನಿಯಮ ಎನ್ನುವುದು ಭ್ರಮೆಯಂತೆ ತೋರುತ್ತದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್, "ಸರಕಾರದ ಅಧೀನದಲ್ಲಿರುವ ಕೆಲ ಸಂಸ್ಥೆಗಳ ಬಗ್ಗೆ ಬಿಜೆಪಿ ಹೊಂದಿರುವ ನಿಲುವುಗಳಿಗೆ ಮುಖ್ಯ ನ್ಯಾಯಮೂರ್ತುಯವರ ಮಾತುಗಳು ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ನ್ಯಾಯಮೂರ್ತಿಗಳು ಪ್ರಜಾಪ್ರಭುತ್ವದ ಮತ್ತು ಸ್ವಾತಂತ್ರ್ಯದ ಕುರಿತು ಬಿಜೆಪಿ ಆಡಳಿತದ ಸಂದರ್ಭದಲ್ಲಿ ಮಾತನಾಡುತ್ತಿರುವುದೇಕೆ ಎಂಬುವುದರ ಬಗ್ಗೆ ಬಿಜೆಪಿಗರು ವಿವರಣೆ ನೀಡಬೇಕು" ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಯವರ ಈ ಹೇಳಿಕೆಗಳು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ಪರಿವರ್ತಿಸುವ ಬಿಜೆಪಿಯ ಗುರಿಯನ್ನು ಬಯಲುಗೊಳಿಸಿದೆ ಎಂದು ಅವರು ಹೇಳಿದರು.
"ಸಾರ್ವಜನಿಕರ ಭಾವನಾತ್ಮಕ ವಿಚಾರಗಳು ಮತ್ತು ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಮಾಹಿತಿಗಳು ನ್ಯಾಯಾಧೀಶರನ್ನು ವಿಚಲಿತಗೊಳಿಸಬಾರದು. ನ್ಯಾಯಾಂಗವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರ್ಯಾಂಗಕ್ಕೆ ಮತ್ತು ಶಾಸಕಾಂಗಕ್ಕೆ ನಿಯಂತ್ರಿಸಲಾಗದು" ಎಂದು ಸಿಜೆಐ ಎನ್.ವಿ ರಮಣ ಹೇಳಿಕೆ ನೀಡಿದ್ದರು.







