400 ಮೀ. ಹರ್ಡಲ್ಸ್ ನಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತೀಯ ನೌಕಾದಳದ ಎಂ.ಪಿ ಜಾಬಿರ್

photo: twitter
ಭಾರತೀಯ ನೌಕಾಪಡೆಯ ಅಥ್ಲೀಟ್ ಆಗಿರುವ ಎಂಪಿ ಜಾಬಿರ್ 400 ಮೀ. ಹರ್ಡಲ್ಸ್ ನಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪಟಿಯಾಲದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಜಾಬಿರ್ 49.78 ಸೆಂಕೆಂಡ್ ಗಳಲ್ಲಿ ಗುರಿ ತಲುಪಿದ್ದಾರೆ ಎಂದು ಭದ್ರತಾ ವಕ್ತಾರರೋರ್ವರು ತಿಳಿಸಿದ್ದಾಗಿ indiatvnews.com ವರದಿ ಮಾಡಿದೆ.
ವಿಶ್ವ ರ್ಯಾಂಕಿಂಗ್ ಕೋಟಾದಲ್ಲಿ ಒಟ್ಟು 14 ಸ್ಥಾನಗಳಿದ್ದು, ಇದರನ್ವಯ ಜಾಬಿರ್ ಆಯ್ಕೆಯಾಗಿದ್ದಾರೆ. ಒಟ್ಟು 40 ಮಂದಿ ಅಥ್ಲೀಟ್ ಗಳು ಆಯ್ಕೆಯಾಗಿದ್ದು, ಜಾಬಿರ್ ಈಗಾಗಲೇ ವಿಶ್ವ ಮಟ್ಟದಲ್ಲಿ 34ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯವರಾದ ಜಾಬಿರ್ ಭಾರತೀಯ ನೌಕಾ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಅನ್ನು ಪೂರ್ತಿಗೊಳಿಸಿದರೆ 400ಮೀ. ಹರ್ಡಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಪ್ರಥಮ ಪುರುಷ ಕ್ರೀಡಾಪಟು ಎಂಬ ದಾಖಲೆಯನ್ನು ಜಾಬಿರ್ ತಮ್ಮ ಹೆಸರಿನಲ್ಲಿ ಬರೆಯಲಿದ್ದಾರೆ. ಈ ಹಿಂದೆ ಕೇರಳ ಮೂಲದವರೇ ಆಗಿದ್ದ ಪಿಟಿ ಉಷಾ ಹರ್ಡಲ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಹಿಂದೆಯೂ ಜಾಬಿರ್ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದರು ಎಂದು ತಿಳಿದು ಬಂದಿದೆ.