ದ.ಕ. ಜಿಲ್ಲೆ : 9 ತಾ.ಪಂ. ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟ

ಮಂಗಳೂರು, ಜು.1: ದ.ಕ. ಜಿಲ್ಲೆಯ 9 ತಾಲೂಕು ಪಂಚಾಯತ್‌ಗಳ ಕ್ಷೇತ್ರಗಳಿಗೆ ಮುಂಬರುವ ಚುನಾವಣೆಗೆ ಅನ್ವಯವಾಗುವಂತೆ ಮೀಸ ಲಾತಿ ಕರಡು ಅಧಿಸೂಚನೆಯನ್ನು ರಾಜ್ಯ ಚುನಾವಣಾ ಆಯೋಗವು ಗುರುವಾರ ಪ್ರಕಟಿಸಿದೆ.
ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದ್ದ ಪ್ರತೀ 10 ಸಾವಿರ ಜನಸಂಖ್ಯೆಗೆ ಬದಲಾಗಿ ಪ್ರತೀ 12,500ರಿಂದ 15 ಸಾವಿರ ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಿದೆ.
ಮಂಗಳೂರು ತಾಪಂ-12, ಮುಲ್ಕಿ-11, ಉಳ್ಳಾಲ-10, ಬಂಟ್ವಾಳ-24, ಮೂಡುಬಿದಿರೆ-11, ಪುತ್ತೂರು-11, ಸುಳ್ಯ-9, ಬೆಳ್ತಂಗಡಿ-21, ಕಡಬ-9 ಕ್ಷೇತ್ರಗಳ ಮೀಸಲಾತಿಯ ಕರಡು ಅಧಿಸೂಚನೆ ಪ್ರಕಟವಾಗಿದೆ.
ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಜು.8ರೊಳಗೆ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, 1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು-560052 ಅವರಿಗೆ ತಲುಪುವಂತೆ ಸಲ್ಲಿಸಬಹುದಾಗಿದೆ ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.





