ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ದಿಲ್ಲಿ ಪೊಲೀಸರ ಅರ್ಜಿಗೆ ಸುಪ್ರೀಂ ತಿರಸ್ಕಾರ

ಹೊಸದಿಲ್ಲಿ, ಜು.1: ದಿಲ್ಲಿ ಸರಕಾರದ ಆಗಿನ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ ಅವರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದ 2018ರ ಪ್ರಕರಣದಲ್ಲಿ ಸಾಕ್ಷಿಯೋರ್ವನ ಹೇಳಿಕೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಒದಗಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿದೆ. ಅದು ರಾಜಕೀಯವಾಗಿ ಆಸಕ್ತಿಯ ವಿಷಯವಾಗಿರಬಹುದು, ಆದರೆ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂದು ಹೇಳಿದ ಪೀಠವು ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ತನಿಖಾ ಸಂಸ್ಥೆಯು ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಅದೊಂದು ಲಿಖಿತ ಹೇಳಿಕೆಯಾಗಿದೆ. ಅದರಿಂದ ಆರೋಪಿಗೆ ಏನಾದರೂ ಲಾಭವಾಗುವುದಿದ್ದರೆ ಆಗಲಿ. ಕ್ರಿಮಿನಲ್ ಕಾನೂನು ತನ್ನದೇ ದಾರಿಯಲ್ಲಿ ಸಾಗಲು ಅವಕಾಶ ನೀಡಿ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಂ.ಆರ್.ಶಾ ಅವರ ಪೀಠವು ತಿಳಿಸಿತು.
ಮುಖ್ಯಮಂತ್ರಿ ನಿವಾಸದಲ್ಲಿ ನಡೆದಿದ್ದ ಸಭೆಯ ಸಂದರ್ಭದಲ್ಲಿ ಪ್ರಕಾಶ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಾಕ್ಷಿಯ ಹೇಳಿಕೆಯನ್ನು ಒದಗಿಸುವಂತೆ ಕೋರಿ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಕಳೆದ ವರ್ಷ ತಳ್ಳಿಹಾಕಿತ್ತು. ಇದನ್ನು ದಿಲ್ಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.







