ಗುಲ್ಶನ್ ಕುಮಾರ ಹತ್ಯೆ ಪ್ರಕರಣ: ಓರ್ವ ಆರೋಪಿಯ ದೋಷ ನಿರ್ಣಯ ಎತ್ತಿ ಹಿಡಿದ ಬಾಂಬೆ ಉಚ್ಚ ನ್ಯಾಯಾಲಯ
ಖುಲಾಸೆಗೊಂಡಿದ್ದ ಇನ್ನೋರ್ವ ಆರೋಪಿಗೂ ಜೀವಾವಧಿ ಶಿಕ್ಷೆ

ಮುಂಬೈ, ಜು.1: ಟಿ-ಸಿರೀಸ್ ಮ್ಯೂಜಿಕ್ ಬ್ರಾಂಡ್ನ ಸ್ಥಾಪಕ ಗುಲ್ಶನ್ ಕುಮಾರ ಹತ್ಯೆ ಪ್ರಕರಣದಲ್ಲಿ ಅಬ್ದುಲ್ ರೌಫ್ ಮರ್ಚಂಟ್ ದೋಷಿಯೆಂದು ಘೋಷಿಸಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಎತ್ತಿಹಿಡಿದಿದೆ. ಆತನಿಗೆ 2002ರಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.
ಆತನ ಸೋದರ ಅಬ್ದುಲ್ ರಶೀದ್ ಮರ್ಚಂಟ್ನನ್ನು ಖುಲಾಸೆಗೊಳಿಸಿದ್ದ ಕೆಳನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದ ಉಚ್ಚ ನ್ಯಾಯಾಲಯವು ಆತನಿಗೂ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು.
ಟಿ-ಸಿರೀಸ್ ನ ಪ್ರತಿಸ್ಪರ್ಧಿ ಮ್ಯೂಜಿಕ್ ಕಂಪನಿ ಟಿಪ್ಸ್ನ ಸಹಸ್ಥಾಪಕ ರಮೇಶ ತೌರಾನಿಯನ್ನು ಖುಲಾಸೆಗೊಳಿಸಿದ್ದನ್ನೂ ಉಚ್ಚ ನ್ಯಾಯಾಲಯವು ಎತ್ತಿಹಿಡಿಯಿತು.
1997ರಲ್ಲಿ ಗುಲ್ಶನ್ ಹತ್ಯೆಯ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಮ್ನ ಸಹಚರನಾಗಿದ್ದ ಅಬ್ದುಲ್ ರೌಫ್ ತಲೆಮರೆಸಿಕೊಂಡಿದ್ದು,2001ರಲ್ಲಿ ಆತನನ್ನು ಬಂಧಿಸಲಾಗಿತ್ತು. 2002ರಲ್ಲಿ ಸೆಷನ್ಸ್ ನ್ಯಾಯಾಲಯವು ಆತ ದೋಷಿ ಎಂದು ಘೋಷಿಸಿತ್ತು. 2009ರಲ್ಲಿ ಪೆರೋಲ್ ಮೇಲೆ ಹೊರಬಂದಿದ್ದ ಆತ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದ. ಅತಿಕ್ರಮ ಪ್ರವೇಶ ಮತ್ತು ನಕಲಿ ಪಾಸ್ಪೋರ್ಟ್ ಹೊಂದಿದ್ದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಆತ 2016ರಲ್ಲಿ ಭಾರತಕ್ಕೆ ಗಡಿಪಾರುಗೊಂಡಿದ್ದ. ಅಬ್ದುಲ್ ರೌಫ್ ಪ್ರಕರಣದಲ್ಲಿ ದೋಷನಿರ್ಣಯಗೊಂಡಿದ್ದ ಏಕೈಕ ವ್ಯಕ್ತಿಯಾಗಿದ್ದ.
ತನ್ನ ದೋಷನಿರ್ಣಯ ಮತ್ತು ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ರೌಫ್ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ ಮಹಾರಾಷ್ಟ್ರ ಸರಕಾರವು ತೌರಾನಿ ಮತ್ತು ಅಬ್ದುಲ್ ರಶೀದ್ ವುರ್ಚಂಟ್ ಅವರ ಖುಲಾಸೆಯ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿತ್ತು.
1997,ಆ.12ರಂದು ಜುಹುವಿನ ದೇವಸ್ಥಾನವೊಂದರಿಂದ ಹೊರಬರುತ್ತಿದ್ದ ಗುಲ್ಶನ್ ಮೇಲೆ ದಾಳಿಕೋರರು 16 ಗುಂಡುಗಳನ್ನು ಹಾರಿಸಿದ್ದು,ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಮುಂಬೈ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ 26 ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರು. ಸಂಗೀತ ನಿರ್ದೇಶಕ ನದೀಂ ಅಖ್ತರ್ ಸೈಫೀಯನ್ನು ಸಹ ಸಂಚುಕೋರ ಎಂದು ಗುರುತಿಸಲಾಗಿದ್ದರೆ,ತೌರಾನಿ ವಿರುದ್ಧ ಕೊಲೆಗೆ ಕುಮ್ಮಕ್ಕು ನೀಡಿದ್ದ ಆರೋಪವನ್ನು ಹೊರಿಸಲಾಗಿತ್ತು. ನದೀಂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬ್ರಿಟನ್ನಿಗೆ ಪರಾರಿಯಾಗಿದ್ದು,ಆಗಿನಿಂದ ಅಲ್ಲಿಯೇ ವಾಸವಾಗಿದ್ದಾನೆ.





