ಹೂ ಮಾರುತ್ತಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಲ್ಯಾಪ್‍ಟಾಪ್ ನೀಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು, ಜು.1: ನಗರದಲ್ಲಿ ಹೂ ಮಾರುತ್ತಲೆ ಎಸೆಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಬನಶಂಕರಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಲ್ಯಾಪ್‍ಟಾಪ್ ಕೊಡುಗೆ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಆದಿಶಕ್ತಿ ದೇವಾಲಯದಲ್ಲಿ ವಿದ್ಯಾರ್ಥಿನಿ ಬನಶಂಕರಿ, ಹೂ ಮಾರಾಟ ಮಾಡುತ್ತಿದ್ದಳು. ಅಲ್ಲಿಯೇ ಸಮಯ ಸಿಕ್ಕಾಗ ಎಸೆಸೆಲ್ಸಿ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಳು. ಈ ಬಗ್ಗೆ ಕಳೆದ ಎರಡು ದಿನದ ಹಿಂದೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿನಿಗೆ ಪ್ರೋತ್ಸಾಹದ ಮಾತನಾಡಿ ತೆರಳಿದ್ದರು.
ಇಂದು (ಗುರುವಾರ) ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ವಿದ್ಯಾರ್ಥಿನಿಗೆ ಲ್ಯಾಪ್‍ಟಾಪ್‍ನ್ನು ಕೊಡುಗೆಯಾಗಿ ನೀಡಿ, ವಿದ್ಯೆ ಬಡತನ ದೂರ ಮಾಡುತ್ತದೆ. ವಿದ್ಯಾರ್ಥಿನಿಯ ಆಸಕ್ತಿ ಕಂಡು ಲ್ಯಾಪ್ ಟ್ಯಾಪ್ ವಿತರಣೆ ಮಾಡಿರುವೆ. ಇದನ್ನು ಯುವತಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದು ಆಶಿಸಿದ್ದಾರೆ.
ಇದೇ ವೇಳೆ ಯುವತಿ ಬನಶಂಕರಿ ಮಾತನಾಡಿ, ಬಿಬಿಎಂಪಿ ಆಯುಕ್ತ ಗೌರವ್‍ಗುಪ್ತಾ ಅವರು ನನಗೆ ಲ್ಯಾಪ್‍ಟಾಪ್ ನೀಡಿರುವುದು ತುಂಬಾ ಖುಷಿ ಆಯಿತು. ವಿದ್ಯಾಭ್ಯಾಸದ ಅವಧಿಯಲ್ಲಿ ನನಗೆ ಈ ನೆರವು ಸಿಕ್ಕಿದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಲ್ಲರ ಆಶಯದಂತೆ ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತೇನೆಂದು ತಿಳಿಸಿದ್ದಾರೆ.







